ಭಾರತೀಯ ಸೇನೆಗೆ ಈಗ ಆನೆ ಬಲ: ಅಂಬಾಲಾ ಏರ್ ಬೇಸ್ ಗೆ ಆಗಮಿಸಿದ ರಾಫೆಲ್ ಯುದ್ಧ ವಿಮಾನ

ಅಂಬಾಲಾ: ತೀವ್ರ ನಿರೀಕ್ಷೆ ಹುಟ್ಟಿಸಿರುವ ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ಧ ವಿಮಾನ ಹರ್ಯಾಣ ಅಂಬಾಲಾ ವಾಯುನೆಲೆಗೆ ಆಗಮಿಸಿದ್ದು, ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ (ಆರ್‌ಕೆಎಸ್ ಭದೌರಿಯಾ) ಬರಮಾಡಿಕೊಂಡಿದ್ದಾರೆ.

ಫ್ರಾನ್ಸ್‌ನಿಂದ ಹೊರಟಿದ್ದ ಮೊದಲ ಹಂತದ ಐದು ರಾಫೆಲ್‌ ಯುದ್ಧ ವಿಮಾನಗಳು ಇಂದು ಮಧ್ಯಾಹ್ನ ಅಂಬಾಲ ವಾಯುನೆಲೆಗೆ ಬಂದಿಳಿದಿವೆ. ಫ್ರಾನ್ಸ್ ಮೂಲದ ಡಸಾಲ್ಟ್ ಕಂಪೆನಿ ನಿರ್ಮಿತ 5 ರಾಫೆಲ್ ಫೈಟರ್ ಜೆಟ್ ವಿಮಾನಗಳು ಇದಾಗಿದ್ದು, ಈ ಐದು ಯುದ್ಧ ವಿಮಾನಗಳ ಪೈಕಿ ಎರಡು ವಿಮಾನಗಳು 2 ಸೀಟರ್ ತರಬೇತಿ ವಿಮಾನಗಳಾಗಿದ್ದು, 3 ಸಿಂಗಲ್ ಸೀಟರ್ ಫೈಟರ್ ಜೆಟ್ ಗಳಾಗಿವೆ.

ಫ್ರೆಂಚ್‌ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಶನ್‌ ಕಾರ್ಖಾನೆ ನಿರ್ಮಿಸಿದ ರಫೆಲ್ ಫೈಟರ್‌ ಜೆಟ್‌ಗಳು ದಕ್ಷಿಣ ಫ್ರಾನ್ಸ್‌ನ ಬೋರ್ಡಾಕ್ಸ್‌ ನಗರದ ಮೆರಿಗ್ನಾಕ್‌ ವಾಯು ನೆಲೆಯಿಂದ ಜುಲೈ 27ರಂದು ಭಾರತದತ್ತ ಮುಖ ಮಾಡಿದ್ದವು. ಬಳಿಕ 7 ತಾಸಿನ ಪ್ರಯಾಣ ಮುಗಿಸಿ, ಮಂಗಳವಾರ ಯುಎಇಯ ಅಲ್‌ ದಫ್ರಾ ನೆಲೆಯಲ್ಲಿ ಸುರಕ್ಷಿತವಾಗಿ ಇಳಿದಿದ್ದವು. ಅಲ್ಲಿ ಯುದ್ಧ ವಿಮಾನಗಳ ಪೈಲಟ್ ಗಳು ವಿಶ್ರಾಂತಿ ಪಡೆದು, ಯುದ್ಧವಿಮಾನಕ್ಕೆ ಇಂಧನ ತುಂಬಿಸಿಕೊಂಡಿದ್ದರು. ಬಳಿಕ ಇಂದು ಬೆಳಗ್ಗೆ 11.44ರ ಹೊತ್ತಿನಲ್ಲಿ ಮತ್ತೆ ಟೇಕ್ ಆಫ್ ಯುದ್ಧ ವಿಮಾನಗಳು ಭಾರತದತ್ತ ಮುಖ ಮಾಡಿದ್ದವು. ಇದೀಗ ಹರ್ಯಾಣ ಅಂಬಾಲಾ ಏರ್ ಬೇಸ್ ಗೆ ಬಂದಿಳಿದಿವೆ.

ರಾಫೆಲ್ ಗೆ ಸೇನೆಯಿಂದ ವಾಟರ್ ಸಲ್ಯೂಟ್
ಅಂಬಾಲಾ ವಾಯುನೆಲೆಯಲ್ಲಿ ಬಂದಿಳಿದ ರಾಫೆಲ್ ಯುದ್ಧ ವಿಮಾನಗಳನ್ನು ಭಾರತೀಯ ಸೇನೆ ವಾಟರ್ ಸೆಲ್ಯೂಟ್ ಮಾಡುವ ಮೂಲಕ ಸ್ವಾಗತ ಕೋರಿತು. ವಾಯುನೆಲೆಯಲ್ಲಿದ್ದ ಎರಡು ವಾಟರ್ ಜೆಟ್ ವಾಹನಗಳು ವಿಮಾನಗಳ ಮೇಲೆ ನೀರನ್ನು ಸುರಿಯುವ ಮೂಲಕ ವಿದ್ಯುಕ್ತವಾಗಿ ವಿಮಾನಗಳನ್ನು ಬರ ಮಾಡಿಕೊಂಡವು. ಐಎನ್ಎಸ್ ಕೋಲ್ಕತಾ ಜೊತೆ ಮೊದಲ ಸಂಪರ್ಕ
ಇನ್ನು ಯುಎಇಯ ಅಲ್ ದಫ್ರಾ ನೆಲೆಯಿಂದ ಟೇಕ್ ಆಫ್ ಆದ ಬಳಿಕ ರಾಫೆಲ್ ಯುದ್ಧ ವಿಮಾನಗಳು ಪಶ್ಚಿಮ ಅರೇಬಿಯನ್ ಸಮುದ್ರದಲ್ಲಿ ಕರ್ತವ್ಯನಿಯೋಜನೆಗೊಂಡಿರುವ ಭಾರತೀಯ ಯುದ್ಧ ನೌಕೆ ಐಎನ್ಎಸ್ ಕೋಲ್ಕತಾ ಜೊತೆ ಮೊದಲ ಸಂಪರ್ಕ ಸಾಧಿಸಿದ್ದವು. ಐಎನ್ಎಸ್ ಕೋಲ್ಕತಾ ನೌಕೆಯಲ್ಲಿದ್ದ ಡೆಲ್ಟಾ 63 ತಮ್ಮನ್ನು ತಾವು ಪರಿಚಯಿಸಿಕೊಂಡು ಇಂಡಿಯನ್ ಓಶನ್ ಗೆ ಸ್ವಾಗತ ಎಂದು ಹೇಳಿದರು. ಈ ವೇಳೆ ಉತ್ತರಿಸಿದ ರಾಫೆಲ್ ಲೀಡರ್ ಪೈಲಟ್, ತುಂಬಾ ಧನ್ಯವಾದಗಳು.. ಸಮುದ್ರ ಗಡಿಯನ್ನು ಕಾಪಾಡುವ ಭಾರತೀಯ ಯುದ್ಧನೌಕೆಗಳು ಹೆಚ್ಚು ಧೈರ್ಯ ತುಂಬುತ್ತವೆ ಎಂದು ಹೇಳಿದರು. ಇದಕ್ಕೆ ಸ್ಪಂಧಿಸಿದ ಡೆಲ್ಟಾ 63 ನೀವು ವೈಭವವಾಗಿ ಭಾರತೀಯ ವಾಯುಗಡಿ ಪ್ರವೇಶಿಸಿದ್ದೀರಿ. ಯಶಸ್ವಿಯಾಗಿ ಲ್ಯಾಂಡಿಂಗ್ ಕೂಡ ಆಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಬಿಗಿಭದ್ರತೆ
ಅಂಬಾಲ ವಾಯುನೆಲೆ ಸುತ್ತಮುತ್ತಲಿನ 3 ಕಿ.ಮೀ. ಪ್ರದೇಶವನ್ನು ‘ಡ್ರೋನ್‌ರಹಿತ ವಲಯ’ ಎಂದು ಘೋಷಿಸಲಾಗಿದೆ. ಭದ್ರತಾ ವ್ಯವಸ್ಥೆ ಉಲ್ಲಂಘಿಸಿದ ಯಾರೇ ಆದರೂ ಕಠಿಣ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಂಬಾಲ ಕಂಟೋನ್ಮೆಂಟ್‌ ಡಿಎಸ್ಪಿ ಎಚ್ಚರಿಕೆ ನೀಡಿದ್ದಾರೆ.

ಆಗಸದಲ್ಲಿಯೇ ಇಂಧನ
ಫ್ರಾನ್ಸ್‌ನಿಂದ ಹೊರಟು ಯುಎಇಯ ಅಲ್‌-ಧಫ್ರಾ ವಾಯು ನೆಲೆಯಲ್ಲಿ ವಿಶ್ರಾಂತಿಗಾಗಿ ತಂಗಿದ್ದ ರಫೇಲ್‌ ಪೈಲಟ್‌ಗಳು ಮಂಗಳವಾರ ಅಲ್ಲಿಂದ ಅಂಬಾಲದತ್ತ ಪ್ರಯಾಣ ಶುರು ಮಾಡಿದ್ದರು. ಮಾರ್ಗ ಮಧ್ಯೆಯೇ 30 ಸಾವಿರ ಅಡಿ ಎತ್ತರದಲ್ಲಿ ಯುದ್ಧ ವಿಮಾನಗಳಿಗೆ ಇಂಧನ ಪೂರೈಸಲಾಗಿದೆ. ಭಾರತದ ಮಟ್ಟಿಗೆ ಇದೊಂದು ಮಹತ್ವದ ಸಾಧನೆಯೇ ಆಗಿದೆ. ಫ್ರಾನ್ಸ್‌ನ ವಾಯುಪಡೆಯ ನೆರವಿನ ಜತೆಯಲ್ಲಿ ಇಂಧನ ಪೂರೈಸಲಾಗಿದೆ. 

Leave a Reply

Your email address will not be published. Required fields are marked *

error: Content is protected !!