ಸ್ವ ಸಹಾಯ ಸಂಘಗಳ ಮಹಿಳಾ ಕಾರ್ಮಿಕರ ಉತ್ಪನ್ನ ಮಾರಾಟಕ್ಕೆ ಡಿಟಿಟಲ್ ವೇದಿಕೆ- ಅಮೆಜಾನ್ ಜೊತೆ ಒಪ್ಪಂದ
ಬೆಂಗಳೂರು: ಸ್ವ ಸಹಾಯ ಸಂಘಗಳ ಮಹಿಳಾ ಕಾರ್ಮಿಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಅವರ ಉತ್ಪನ್ನಗಳ ಮಾರಾಟಕ್ಕೆ ಡಿಟಿಟಲ್ ವೇದಿಕೆ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಖ್ಯಾತ ಆನ್ ಲೈನ್ ಶಾಪಿಂಗ್ ತಾಣ ಅಮೆಜಾನ್ ಸಂಸ್ಥೆ ಪರಸ್ಪರ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.
ಉನ್ನತ ಶಿಕ್ಷಣ, ಐಟಿ, ಬಿಟಿ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಸಿಎನ್ ಅಶ್ವಥ್ ನಾರಾಯಣ್ ಮತ್ತು ಅಮೆಜಾನ್ ಕಂಪೆನಿಯ ಉಪಾಧ್ಯಕ್ಷ ಚೇತನ್ ಕೃಷ್ಣ ಅವರ ಉಪಸ್ಥಿತಿಯಲ್ಲಿ ಸಿಎಂ ಬೊಮ್ಮಾಯಿ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಒಪ್ಪಂದದ ಅನ್ವಯ ರಾಜ್ಯದ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳನ್ನು ಡಿಜಿಟಲ್ ವೇದಿಕೆಯಲ್ಲಿ ಮಾರಾಟ ಮಾಡಲು ಮುಖ್ಯಮಂತ್ರಿ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದ ಸದಸ್ಯರು ಮತ್ತು ಅಮೆಜಾನ್ ನಡುವೆ ಒಪ್ಪಂದಕ್ಕೆ ಸಹಿ ಮಾಡಲಾಯಿತು.
ಈ ಬಗ್ಗೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ‘ಇದು 2 ಲಕ್ಷಕ್ಕೂ ಅಧಿಕ ಸ್ವ ಸಹಾಯ ಸಂಘಗಳು, ಲಕ್ಷಾಂತರ ಮಹಿಳೆಯರ ಸಬಲೀಕರಣಕ್ಕೆ ನೆರವಾಗುವ ಜತೆ ರಾಜ್ಯದ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡಲಿದೆ ಎಂದು ಹೇಳಿದ್ದಾರೆ.
ಈ ಒಪ್ಪಂದದ ಮೂಲಕ ಅಮೆಜಾನ್ ತನ್ನ ಮಾರುಕಟ್ಟೆಯಲ್ಲಿ SHG ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಕರ್ನಾಟಕ ರಾಜ್ಯದ ಸಾವಿರಾರು ಮಹಿಳಾ ಉದ್ಯಮಿಗಳಿಗೆ ಆನ್ಲೈನ್ಗೆ ಬರಲು ಮತ್ತು ಅವರ ಉತ್ಪನ್ನಗಳಿಗೆ ವ್ಯಾಪಕ ಮಾರುಕಟ್ಟೆಯನ್ನು ಪ್ರವೇಶಿಸಲು ತರಬೇತಿ ನೀಡಲು ಮತ್ತು ಸಬಲೀಕರಣಗೊಳಿಸಲು ತನ್ನ ‘ಸಹೇಲಿ’ ಕಾರ್ಯಕ್ರಮದ ಪ್ರಯೋಜನಗಳನ್ನು ವಿಸ್ತರಿಸುತ್ತದೆ ಎಂದು ಹೇಳಿದ್ದಾರೆ.