ರಾಜ್ಯಾದ್ಯಂತ ವ್ಯಾಪಿಸಿದ ಹಿಜಾಬ್​ ವಿವಾದ: ಮೈಸೂರಿನಲ್ಲಿ ‘ಐಲವ್​ ಹಿಜಾಬ್‘​ ಅಭಿಯಾನ ಆರಂಭ

ಮೈಸೂರು: ಕರಾವಳಿ ಜಿಲ್ಲೆಗಳಲ್ಲಿ ಆರಂಭವಾದ ಹಿಜಾಬ್​ ವಿವಾದ ಇದೀಗ ಇಡೀ ರಾಜ್ಯವನ್ನು ವ್ಯಾಪಿಸುತ್ತಿದೆ. ಉಡುಪಿ ಹಾಗೂ ಕುಂದಾಪುರ ಬಳಿಕ ಇದೀಗ ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲೂ ಹಿಜಾಬ್​ ವಿವಾದ ಪ್ರತಿಧ್ವನಿಸುತ್ತಿದ್ದು, ಕಾಲೇಜಿಗೆ ಹಿಜಾಬ್ ಧರಿಸಿ ಹೋಗುವ ಮೂಲಕ ಕೆಲ ವಿದ್ಯಾರ್ಥಿನಿಯರು ಸರ್ಕಾರದ ನಿಯಮಕ್ಕೆ ಸೆಡ್ಡು ಹೊಡೆದಿದ್ದಾರೆ.

ವಿದ್ಯಾರ್ಥಿನಿಯರು ಮೈಸೂರಿನ ಬನ್ನಿಮಂಟಪದ ಹೈವೆ ಸರ್ಕಲ್ ಬಳಿ ಹಿಜಾಬ್ ಅಭಿಯಾನ ನಡೆಸುತ್ತಿದ್ದು, ಐ ಲವ್ ಹಿಜಾಬ್ ಎಂಬ ಘೋಷಣಾ ವಾಕ್ಯಗಳನ್ನು ಪ್ರದರ್ಶಿಸಿ, ಪರಸ್ಪರ ಹಿಜಾಬ್​​ ತೊಡಿಸಿ ಪ್ರತಿಭಟಿಸಿದ್ದಾರೆ. ಅಲ್ಲದೇ ಎಲ್ಲಾ ಕಾಲೇಜಿನಲ್ಲೂ ಹಿಜಾಬ್​ಗೆ ಅವಕಾಶ ಕಲ್ಪಿಸುವಂತೆ ವಿದ್ಯಾರ್ಥಿನಿಯರು ಮನವಿ ಮಾಡಿಕೊಂಡರು. ಈ ಮೂಲಕ ಉಡುಪಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬೆಂಬಲ ವ್ಯಕ್ತಪಡಿಸಿದರು. 

ಬೆಳಗಾವಿಯ ರಾಮದುರ್ಗ ಕಾಲೇಜಿನಲ್ಲಿಯೂ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಬಂದ ಸಂದರ್ಭದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿದ ಘಟನೆ ನಡೆಯಿತು. 

ಈ ಎಲ್ಲಾ ಬೆಳವಣಿಗೆ ನಡುವಲ್ಲೇ ಸಿಎಂ ಬೊಮ್ಮಾಯಿಯವರು ವಿವಾದ ಸಂಬಂಧ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ  ನಡೆಸಿತರು. ಸಭೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಹಾಜರಿದ್ದರು. 

Leave a Reply

Your email address will not be published. Required fields are marked *

error: Content is protected !!