ಗುಣಮಟ್ಟದ ಕೋವಿಡ್-19 ಟೆಸ್ಟ್: ಕರ್ನಾಟಕಕ್ಕೆ ಅಗ್ರ ಸ್ಥಾನ, ನಂತರದಲ್ಲಿ ಒಡಿಶಾ, ಕೇರಳ
ಬೆಂಗಳೂರು: ದೇಶಾದ್ಯಂತ ಅಬ್ಬರಿಸುತ್ತಿರುವ ಮಾರಕ ಕೊರೋನಾ ವೈರಸ್ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಕರ್ನಾಟಕ ಮುಂದಿದೆ. ಈ ಬಗ್ಗೆ ಅಧ್ಯಯನವೊಂದು ವರದಿ ನೀಡಿದ್ದು, ಗುಣಮಟ್ಟದ ಕೋವಿಡ್-19 ಟೆಸ್ಟ್ ನಡೆಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎನ್ನಲಾಗಿದೆ.
ಈ ಬಗ್ಗೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, ಟೆಕ್ ಇಂಡಸ್ಟ್ರಿ (ಯುಎಸ್) ಮತ್ತು ಏರೋಸಾಲ್ ಇಂಡಸ್ಟ್ರಿ (ಸ್ವಿಟ್ಜರ್ಲೆಂಡ್) ಸಂಸ್ಥೆಗಳು ಅಧ್ಯಯನ ನಡೆಸಿದ್ದು, ಭಾರತದಲ್ಲಿ ಕೋವಿಡ್-19 ಟೆಸ್ಟ್ ನಡೆಸುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ, ಒಡಿಶಾ, ಕೇರಳದಲ್ಲಿ ಟೆಸ್ಟ್ ಗುಣಮಟ್ಟ ಉತ್ತಮವಾಗಿದೆ ಎಂದು ಹೇಳಿದೆ.
ಕೋವಿಡ್ ಟೆಸ್ಟ್ ನಡೆಸುವ ಗುಣಮಟ್ಟದ ಪ್ರಮಾಣದ ಆಧಾರದ ಮೇಲೆ ರಾಜ್ಯಗಳಲ್ಲಿ ವಿಂಗಡಿಸಲಾಗಿದ್ದು, ಈ ಪೈಕಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಬಳಿಕ ಕೇರಳ ರಾಜ್ಯವಿದ್ದು, ಮೂರನೇ ಸ್ಥಾನದಲ್ಲಿ ಒಡಿಶಾ ಇದೆ. ಲಭ್ಯತೆ, ಕೈಗೆಟುಕುವಿಕೆ, ದತ್ತಾಂಶ ಸಂಗ್ರಹಣೆ ಮತ್ತು ಗೌಪ್ಯತೆ ಎಂಬ ವಿಭಾಗಳಾಗಿ ವಿಂಗಡಿಸಿ ಸಂಶೋಧನೆ ನಡೆಸಲಾಗಿತ್ತು. ಈ ಪೈಕಿ ಕರ್ನಾಟಕ 0.61 ಅಂಕಗಳಿಕೆಯೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, 0.52 ಅಂಕದೊಂದಿಗೆ ಕೇರಳ 2ನೇ ಸ್ಥಾನದಲ್ಲಿದೆ. ಇನ್ನು 0.51 ಅಂಕ ಗಳಿಸಿರುವ ಒಡಿಶಾ ಮೂರನೇ ಸ್ಥಾನದಲ್ಲಿದೆ. ಪಟ್ಟಿಯಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳು ಕೊನೆಯ ಸ್ಥಾನದಲ್ಲಿವೆ.
ಮೇ-19ರಿಂದ ಜೂನ್ 1ರವರೆಗಿನ 2 ವಾರಗಳ ಕೋವಿಡ್ ಟೆಸ್ಟ್ ವರದಿಗಳನ್ನು ಕೇಂದ್ರಡಳಿತ ಪ್ರದೇಶ ಮತ್ತು ರಾಜ್ಯಗಳು ಹಂಚಿಕೆ ಮಾಡಿಕೊಂಡಿದ್ದು, ಈ ದತ್ತಾಂಶಗಳ ವಿಶ್ಲೇಷಣೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ತನ್ನ ಸಂಶೋಧನೆಗೆ ಸಂಶೋಧಕರು 0 ಯಿಂದ 1 ಅಂಕ ನೀಡಿದ್ದು, ಈ ಪೈಕಿ ಕರ್ನಾಟಕ ಗರಿಷ್ಠ ಅಂದರೆ 0.61 ಅಂಕಗಳಿಸಿದೆ.
ಉಳಿದಂತೆ ಪುದುಚೇರಿ (0.51), ಮತ್ತು ತಮಿಳುನಾಡು (0.51). ಮೇಘಾಲಯ (0.13), ಹಿಮಾಚಲ ಪ್ರದೇಶ (0.13), ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (0.17) ಪಟ್ಟಿಯಲ್ಲಿ ಬಳಿಕದ ಸ್ಥಾನದಲ್ಲಿದ್ದು, ಉತ್ತರ ಪ್ರದೇಶ (0.0), ಬಿಹಾರ (0.0) ಪಟ್ಟಿಯ ಕೊನೆಯ ಸ್ಥಾನದಲ್ಲಿವೆ.