ಕ್ಲಬ್ ಹೌಸ್’ನಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಟೀಕೆ- ಎಫ್ಐಆರ್ ದಾಖಲು
ನವದೆಹಲಿ: ಸಾಮಾಜಿಕ ಜಾಲತಾಣ ಆಪ್ ಕ್ಲಬ್ ಹೌಸ್ ಆಪ್ ನಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದವರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ದೆಹಲಿ ಮಹಿಳಾ ಆಯೋಗ ಆಗ್ರಹಿಸಿದೆ.
ಕ್ಲಬ್ ಹೌಸ್ ಆಪ್ ನಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ನಡೆದ ಚರ್ಚೆಯ ಆಡಿಯೋ ಕ್ಲಿಪ್ ನ್ನು ಒಬ್ಬರು ಟ್ವಿಟರ್ ಗೆ ಹಾಕಿ ಅದರಲ್ಲಿ ನನ್ನನ್ನು ಟ್ಯಾಗ್ ಮಾಡಿದ್ದರು. ಆ ಆಡಿಯೋ ಕ್ಲಿಪ್ ನಲ್ಲಿ ಮುಸ್ಲಿಮ್ ಮಹಿಳೆಯರ ವಿರುದ್ಧ ಲೈಂಗಿಕತೆಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಮಾತುಗಳಿದ್ದವು. ಈ ರೀತಿ ಮಾತನಾಡಿದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಡಿಸಿಡಬ್ಲ್ಯು ಮುಖ್ಯಸ್ಥರಾಗಿರುವ ಸ್ವಾತಿ ಮಾಲಿವಾಲ್ ತಿಳಿಸಿದ್ದಾರೆ.
“ಹಿಂದೂ ಯುವತಿಯರಿಗಿಂತಲೂ ಮುಸ್ಲಿಂ ಯುವತಿಯರು ಸುಂದರವಾಗಿರುತ್ತಾರೆ” ಎಂಬ ವಿಷಯದ ಬಗ್ಗೆ ನಡೆದ ಕ್ಲಬ್ ಹೌಸ್ ಸಂವಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಯೋಗ ಪೊಲೀಸರಿಗೆ ಪತ್ರಬರೆದಿದ್ದು, ಆರೋಪಿಗಳ ವಿರುದ್ಧ ತಕ್ಷಣವೇ ಎಫ್ಐಆರ್ ನ್ನು ದಾಖಲಿಸುವಂತೆ ಸೂಚಿಸಿದೆ.
ಈ ಪ್ರಕರಣದ ಸಂಬಂಧ ಕೈಗೊಂಡ ಕ್ರಮಗಳ ಕುರಿತು ವಿಸ್ತೃತ ವರದಿ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಡಿಡಬ್ಲ್ಯುಸಿ ಐದು ದಿನಗಳ ಕಾಲಾವಕಾಶ ನೀಡಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷರಾದ ಸ್ವಾತಿ ಮಾಲಿವಾಲ್ ತಿಳಿಸಿದ್ದಾರೆ.
ಮೊದಲು ಸುಲ್ಲಿ ಡೀಲ್ಸ್, ನಂತರ ಬುಲ್ಲಿ ಬಾಯ್, ಈಗ ಕ್ಲಬ್ ಹೌಸ್ ನಲ್ಲಿ ನಡೆದ ಚರ್ಚೆ, ಇದು ಇನ್ನೂ ಹೀಗೆ ಎಷ್ಟು ಸಮಯ ಮುಂದುವರೆಯುತ್ತದೆ? ಎಂದು ಸಾಮಾಜಿಕ ಜಾಲತಾಣದಲ್ಲಿ ಡಿಡಬ್ಲ್ಯುಸಿ ಅಧ್ಯಕ್ಷರು ಪ್ರಶ್ನಿಸಿದ್ದಾರೆ