ಕೊರಗಜ್ಜನ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಿ- ಸಮುದಾಯದ ಉಳಿಯುವಿಗೆ ನಿಮ್ಮ ಕೊಡುಗೆ ಏನು..?
ಕೊರಗ ತನಿಯನಿಗೆ ಸಂಬಂಧಿಸದೆ ಇರುವ ವೇಷವನ್ನು ಕೊರಗ ತನಿಯನ ವೇಷವೆಂದು ಬಣ್ಣಿಸಿ ಜನರ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು ಪದೇ ಪದೇ ಕೊರಗಜ್ಜ ಮತ್ತು ಕೊರಗ ಸಮುದಾಯವನ್ನು ಅಪಮಾನ ಮಾಡಲಾಗುತ್ತಿದೆ.
ದಕ್ಷಿಣ ಕರಾವಳಿ ಜಿಲ್ಲೆಗಳ ಮೂಲನಿವಾಸಿಗಳಾದ ಕೊರಗ ಸಮುದಾಯ ಮತ್ತು ನಮ್ಮ ಗುರಿಕಾರ ಕೊರಗ ತನಿಯನ ಮೇಲೆ ಇತ್ತೀಚೆಗೆ ಪ್ರೀತಿ, ಅಭಿಮಾನ ಉಕ್ಕಿಹರಿದಂತೆ ಕಾಣುತ್ತಿದೆ.
ಕೊರಗ ಸಮುದಾಯದ ನಾವು ಹೇಳುತ್ತೇವೆ ಕೊರಗ ತನಿಯ ಅವನು ದೇವರು ಅಲ್ಲಾ, ದೈವವು ಅಲ್ಲಾ, ನಮ್ಮ ಸಮುದಾಯದ ಒಬ್ಬ ಗುರಿಕಾರ. ನಿಮ್ಮ ಮಡಿವಂತಿಕೆಯ ಮೋಸ ಕುತಂತ್ರಕ್ಕೆ ಬಲ್ಲಿಯಾದವನ್ನು. ಕೊರಗ ತನಿಯ ಸಾಮಾಜಿಕ ನ್ಯಾಯದ ಪ್ರತಿಕಾ. ಹುಭಾಶಿಕನ್ನು ನೇರವಾಗಿ ಎದುರಿಸಲು ಸಾಧ್ಯವಾಗದೆ ಮೊಸದಿಂದ ಸಾಯಿಸಿ ಇಡೀ ಸಮುದಾಯವನ್ನು ನಿರ್ಘತಿಕ ಪರಿಸ್ಥಿತಿಗೆ ದೂಡಿದಿರಿ. ಹಾಗೆ ಕೊರಗ ತನಿಯನ ಬದುಕು ಸಹ ದುರಂತ ಕಥೆಯಾಗಿದೆ.
ಒಂದು ಪಾಡ್ದಾನದ ಪ್ರಕಾರ ಮೈರಕ್ಕನ ಆಶ್ರಮದಲ್ಲಿ ಬೆಳೆದ ತನಿಯ ದೊಡ್ಡವನಾದ ಬಳಿಕ ಎಣಸೂರು ಬಾಳಿಕೆಯ ರಾಜ ದೈವಗಳ ನೇಮಕ್ಕೆ ತೆಂಗಿನ ಎಳೆ ಗರಿ, ಸೀಯಾಳ, ಬಾಳೆದಿಂಡು, ಸಿಂಗಾರ ಇತ್ಯಾದಿ ಹೊರೆಯನ್ನು ಹೊರಲು ಏಳು ಮಂದಿ ಕೆಲಸದವರು ಬರದೆ ಇದ್ದಾಗ ತನಿಯ ಒಬ್ಬನೇ ತಂದು ಕೊಡುತ್ತಾನೆ. ಆದರೆ ಕಾಡು ಕೊರಗ ಎನ್ನುವ ಕಾರಣಕ್ಕೆ ಅವನನ್ನು ದೇವಸ್ಥಾನದ ಒಳಗೆ ಬರಲು ನಿರಾಕರಿಸಲಾಗಿದೆ. ಇದನ್ನು ತನಿಯ ಪ್ರತಿಭಟಿಸುತ್ತಾನೆ. ತಾನು ತಂದ ವಸ್ತುಗಳು ಆಗುತ್ತದೆ ಆದರೆ ನಾನು ಆಗುವುದಿಲ್ಲವೆ ಎಂದು ಪ್ರಶ್ನಿಸುತ್ತಾನೆ. ಅಲೆ ಪಕ್ಕದಲ್ಲಿ ಇರುವ ಮರದಿಂದ ತನ್ನ ಹೆಂಡತಿಗೆ ಮಾಪಲ ಹಣ್ಣು ಕೊಯ್ಲುತ್ತಾನೆ. ಆಗ ಅಲ್ಲಿನ ಮೈಸಂದಾ ಮತ್ತು ಕೊಡಂಗೆನಾರ್ ದೈವಗಳ ಕೆಂಗಣ್ಣಿಗೆ ಗುರಿಯಾಗಿ ಮಾಯವಾದನು. ಈಗಲೂ ಆ ದೈವಗಳು ಶ್ರೇಣೀಕಣದಲ್ಲಿ ಕೊರಗ ತನಿಯನಿಗಿಂತ ಮೇಲಿವೆ ಎಂಬುದನ್ನು ಗಮನಿಸಬೇಕು. ಹಾಗೆ ಇನ್ನೊಂದು ಪಾಡ್ದಾನದಲ್ಲಿ ದೇವಸ್ಥಾನದ ಪ್ರಾಂಗಣದಲ್ಲಿ ಇರುವ ಮಾಫಲ ಹುಳಿ ಕೊಯ್ಯಲು ಹೋಗುವಾಗ ಆತನನ್ನು ಬ್ರಾಹ್ಮಣರು ಕಡಿದು ಕೊಲ್ಲುತ್ತಾರೆ.
ಕೊರಗ ತನಿಯ ಯಾವತ್ತೂ ಕೂಡ ಹಿಂದು ಧರ್ಮದ ಸಂಕೇತವಲ್ಲ. ಆತನನ್ನು ಕರಾವಳಿ ಜಿಲ್ಲೆಗಳ ಕೊರಗ ಸಮುದಾಯ ಮತ್ತು ಆದಿಮ ಸಂಸ್ಕೃತಿಯ ಪ್ರತೀಕ. ಕೊರಗರು ಆಗಲಿ ಕೊರಗ ತನಿಯನ ಕುರಿತು ಮಾತನಾಡುವ ಮೊದಲು ನಿಮ್ಮವರು ಹಾಗೂ ನೀವು ಮಾಡಿದ, ಮಾಡುತ್ತಿರುವ ಮಹಾ ಮೋಸಗಳ ಬಗ್ಗೆ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಿ. ಹಿಂದೂ ಇರಲಿ ಮುಸ್ಲಿಂ ಇರಲಿ ಮದುವೆ, ಜಾತ್ರೆ, ತಂಬಿಲದಲ್ಲಿ ನಮ್ಮ ಗುರಿಕಾರ ಕೊರಗ ತನಿಯನ ವೇಷ ಹಾಕಲು ನಿಮಗೆ ಒಪ್ಪಿಗೆ ಕೊಟವರು ಯಾರು. ಕೊರಗರ ವೇಷದಲ್ಲಿ ಕೊರಗ ಸಮುದಾಯದ ಘನತೆ ಗೌರವದ ಬದುಕಿಗೆ ಅವಮಾನ ಮಾಡಿ ಪದ ಪ್ರಯೋಗ ಮಾಡುವುದು ಎಷ್ಟು ಸರಿ.
ಯಕ್ಷಗಾನದಲ್ಲಿ ಬ್ರಾಹ್ಮಣ ವೇಷ, ಮುಸ್ಲಿಂ ವೇಷ ಹಾಕಿದಕ್ಕೆ ತಾವೇಲ್ಲರೂ ಬಹಳ ಪ್ರತಿಕ್ರಿಯೆ ನೀಡುವವರು, ವಿರೋಧಿಸುವವರು, ಕೊರಗರ ವೇಷ ಹಾಕಿ ನಮ್ಮನ್ನು ಹಿಯಾಳಿಸುವಿರಲ್ಲ ಆಗ ನಿಮ್ಮ ಹಿಂದೂ ಧರ್ಮದಲ್ಲಿ ಮತ್ತು ಈ ಪ್ರಜಾಪ್ರಭುತ್ವದ ನ್ಯಾಯಯುತ ಸಮಾಜದಲ್ಲಿ ಕೊರಗರು ಇರುವುದಿಲ್ಲವೇ.
ಇಡೀ ಕೊರಗ ಸಮುದಾಯದ ಅಸ್ತಿತ್ವವನ್ನು ಬುಡಮೇಲು ಮಾಡಿದವರು ಕೊರಗ ತನಿಯನ್ನು ದೈವ, ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಿ. ವಿನಾಶದಂಚಿಗೆ ಬಂದಿರುವ ಕೊರಗ ಸಮುದಾಯದ ಉಳಿಯುವಿಗೆ ನಿಮ್ಮ ಕೊಡುಗೆ ಏನು ತಿಳಿಸಿ. ಕೊರಗ ತನಿಯ ಮತ್ತು ಕೊರಗ ಸಮುದಾಯವನ್ನು ರಾಜಕೀಯಕ್ಕೆ ಬಳಸಿ ಅಪಮಾನ ಮಾಡಿರುವುದನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಖಂಡಿಸುತ್ತದೆ. ಹಾಗೆ ಎಲ್ಲರೂ ಸಾಲೆತ್ತೂರಿನ ಕೊರಗಜ್ಜ ವೇಷದ ವಿವಾದಕ್ಕೆ ಸಂಬಂಧಿಸಿದಂತೆ ದ್ವೇಷ ಹರಡಲು ಮಾಡಿರುವ ಹುನ್ನಾರಗಳನ್ನು ವಿಫಲಗೊಳಿಸಿ ಶಾಂತಿ ಸೌಹಾರ್ದತೆ ಕಾಪಾಡಬೇಕು.
ಶ್ರೀಧರ ನಾಡ ಜಿಲ್ಲಾ ಸಂಚಾಲಕರು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಉಡುಪಿ ಜಿಲ್ಲೆ