ಮೇಕೆದಾಟು ಪಾದಯಾತ್ರೆ: ಡಿಕೆಶಿ, ಸಿದ್ದರಾಮಯ್ಯ ಸೇರಿ 30 ಮಂದಿ ವಿರುದ್ಧ ಎಫ್‌ಐಆರ್
ರಾಮನಗರ ಜ.10 : ರಾಜ್ಯಾದ್ಯಂತ ಕೋವಿಡ್ ನಿಯಂತ್ರಣಕ್ಕಾಗಿ ಜಾರಿ ಮಾಡಿರುವ ವೀಕೆಂಡ್ ಕರ್ಫ್ಯೂ ವೇಳೆ ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ 30 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕೋವಿಡ್ ಸೋಂಕು ನಿಯಂತ್ರಣದ ಉದ್ದೇಶದಿಂದ ಸರ್ಕಾರ ರಾಜ್ಯದಲ್ಲಿ ಎಲ್ಲ ಪ್ರತಿಭಟನೆ, ಪಾದಯಾತ್ರೆಯನ್ನು ನಿಷೇಧಿಸಿದೆ. ಹೀಗಿದ್ದರೂ ವೀಕೆಂಡ್ ಕರ್ಫ್ಯೂ ವೇಳೆ ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್‌ಡಿಎಂಎ) ಕಾಯ್ದೆಯ ಅಡಿಯಲ್ಲಿ ಸಾತನೂರು ಪೊಲೀಸ್ ಠಾಣೆಯಲ್ಲಿ ಈ 30 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ವೀಕೆಂಡ್ ಕರ್ಫ್ಯೂ ವೇಳೆ ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದಕ್ಕೆ ಜನರಿಂದ ವ್ಯಾಪಕ ಟೀಕೆ ಕೇಳಿ ಬಂದಿತ್ತು. ಮಾತ್ರವಲ್ಲದೆ ಈ ವಿಚಾರವಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಜನರಯ, ಸಾಮಾನ್ಯ ಜನರು ರಸ್ತೆಗೆ ಬಂದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆದರೆ ಭಾರೀ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಪಾದಯಾತ್ರೆ ಮಾಡಿದವರ ಮೇಲೆ ಕ್ರಮ ಯಾಕೆ ಕೈಗೊಳ್ಳುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.