ಕೊರೋನಾಗಾಗಿ ಖರ್ಚು ಮಾಡಿದ್ದು 2,118 ಕೋಟಿ ರೂ. ಮಾತ್ರ: ಕಾಂಗ್ರೆಸ್ ಆರೋಪಕ್ಕೆ ತಿರುಗೇಟು!
ಬೆಂಗಳೂರು: ಕೋವಿಡ್ ಸಂಬಂಧ ವಿವಿಧ ಇಲಾಖೆಗಳಿಂದ ಖರ್ಚು ಮಾಡಿದ್ದೇ ಕೇವಲ 2,118 ಕೋಟಿ ರೂಪಾಯಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಗರಣದ ಆರೋಪ ಸಂಬಂಧ ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಕೋವಿಡ್ ಸಂಬಂಧ ಒಟ್ಟು 4,167 ಕೋಟಿ ರೂ. ಖರ್ಚು ಮಾಡಿದೆ ಎಂದು ಆರೋಪಿಸಿದ್ದಾರೆ. ಆದರೆ ಎಲ್ಲಾ ಇಲಾಖೆಗಳಿಗೆ 506 ಕೋಟಿ ರೂ.ಕೋವಿಡ್ ನಿಯಂತ್ರಣ ಸಂಬಂಧ ಬಿಡುಗಡೆ ಮಾಡಲಾಗಿದೆ.
ಬಾಧಿತರ ಪರಿಹಾರ ಕ್ರಮಗಳಿಗೆ 1611.7 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ.ಒಟ್ಟು 2,118 ಕೋಟಿ ರೂ.ಮಾತ್ರ ಖರ್ಚಾಗಿದೆ ಎಂದು ತಿರುಗೇಟು ನೀಡಿದರು.
ವೈದ್ಯಕೀಯ ಸಲಕರಣೆ ಖರೀದಿಗಾಗಿ ಆರೋಗ್ಯ ಇಲಾಖೆ 366.70 ಕೋಟಿ ರೂ. ವೈದ್ಯಕೀಯ ಶಿಕ್ಷಣ 33 ಕೋಟಿ ರೂ.,ಎಲ್ಲಾ ಡಿಸಿಗಳಿಗೆ 68.02 ಕೋಟಿ ರೂ., ಡಿಸ್ಟ್ರಿಕ್ಟ್ ಮಿನರಲ್ ಫಂಡ್ ಗೆ 23.97 ಕೋಟಿ ರೂ., ಕಾರ್ಮಿಕ ಇಲಾಖೆಗೆ 4.25 ಕೋಟಿ ರೂ., ಗೃಹ ಇಲಾಖೆಗೆ 5.62 ಕೋಟಿ ರೂ., ಕಾರಾಗೃಹ ಇಲಾಖೆಗೆ 1.05 ಕೋಟಿ ರೂ., ಸಾರಿಗೆ ಇಲಾಖೆಗೆ 2.36 ಕೋಟಿ ರೂ., ಬಿಬಿಎಂಪಿಗೆ 86 ಲಕ್ಷ ರೂ., ಸಮಾಜ ಕಲ್ಯಾಣ ಇಲಾಖೆಗೆ 65 ಲಕ್ಷ ರೂ. ಸೇರಿ ಒಟ್ಟು 506 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.