| ಕೋಲ್ಕತ್ತ ಜ.2: ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿರುವ ಕಾರಣ ನಾಳೆಯಿಂದ ಶಾಲಾ ಕಾಲೇಜುಗಳಿಗೆ ಅನಿರ್ದಿಷ್ಟಾವಧಿ ರಜೆ ಘೋಷಿಸಲಾಗಿದೆ.
ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ನಿರ್ಬಂಧಗಳನ್ನು ಮತ್ತೆ ವಿಧಿಸಿರುವ ಪಶ್ಚಿಮ ಬಂಗಾಳ ಸರಕಾರ ಮತ್ತೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಅದರಂತೆ ಸೋಮವಾರದಿಂದ ಶಾಲಾ ಕಾಲೇಜುಗಳಿಗೆ ಅನಿರ್ದಿಷ್ಟಾವಧಿ ರಜೆ ಘೋಷಿಸಲಾಗಿದೆ.ಜಿಮ್, ಸಾರ್ವಜನಿಕ ಈಜುಕೊಳ, ಸ್ಪಾ ಹಾಗೂ ಬ್ಯೂಟಿ ಪಾರ್ಲರ್ ಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಹಾಗೂ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ 50% ಹಾಜರಾತಿಗೆ ಸೂಚಿಸಲಾಗಿದ್ದು, ವರ್ಕ್ ಫ್ರಂ ಹೋಮ್ ಗೆ ಹೆಚ್ಚಿನ ಒತ್ತು ನೀಡಲು ಪ್ರೋತ್ಸಾಹಿಸಲಾಗಿದೆ.
ಇದರೊಂದಿಗೆ ಪಶ್ಚಿಮ ಬಂಗಾಳದಲ್ಲಿ ಕಟ್ಟು ನಿಟ್ಟಿನ ನೈಟ್ ಕರ್ಫ್ಯೂ ವಿಧಿಸಿದ್ದು, ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳಿಗೆ ನಿಷೇಧ ಹೇರಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು 50% ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದ್ದು, ಆಡಳಿತಾತ್ಮಕ ಸಭೆಗಳನ್ನು ವರ್ಚುಯಲ್ ಮೂಲಕ ನಡೆಸಲಾಗುವುದು ಎಂದು ಬಂಗಾಳ ಮುಖ್ಯ ಕಾರ್ಯದರ್ಶಿ ಎಚ್ಕೆ ದ್ವಿವೇದಿ ತಿಳಿಸಿದ್ದಾರೆ.
ಕೊಲ್ಕತ್ತಾ ಮೆಟ್ರೋ ಹಾಗೂ ಸ್ಥಳೀಯ ಟ್ರೇನುಗಳು 50% ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿದ್ದು, ಸಂಜೆ 7 ಗಂಟೆವರೆಗೆ ಸೇವೆ ಸಲ್ಲಿಸಲಿದೆ. ಉಳಿದಂತೆ ಇತರೆ ರೈಲುಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಚಿತ್ರಮಂದಿರ, ರೆಸ್ಟೋರೆಂಟ್, ಬಾರ್ಗಳು 50% ಸಾಮರ್ಥ್ಯದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದ್ದು, ಶಾಪಿಂಗ್ ಮಾಲ್ಗಳು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಮಾತ್ರ ತೆರೆಯಲಿದೆ. ಮದುವೆ ಸೇರಿದಂತೆ ಎಲ್ಲಾ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳಿಗೆ ಕೇವಲ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಗೊಳಿಸಲಾಗಿದೆ. ಶವಸಂಸ್ಕಾರಕ್ಕೆ 20 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ನಿನ್ನೆ ಒಂದೇ ದಿನದಲ್ಲಿ 4512 ಹೊಸ ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು, ಒಂದೇ ಬಾರಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 13,300 ಕ್ಕೆ ಎರಿದೆ. ಈ ಪೈಕಿ 20 ಕ್ಕೂ ಹೆಚ್ಚು ಒಮೈಕ್ರಾನ್ ಪ್ರಕರಣಗಳು ದಾಖಲಾಗಿರುವುದು ರಾಜ್ಯದ ಜನತೆಯಲ್ಲಿ ಭೀತಿ ಸೃಷ್ಟಿಸಿದೆ.
| |