ಅಧಿಕಾರಿಗಳು ಸೇವಕರಂತೆ ಕೆಲಸಮಾಡಬೇಕೇ ಹೊರತು ಬಾಸ್ನಂತೆ ಅಲ್ಲ- ಡಿಸಿಗಳ ಜೊತೆಗಿನ ಸಭೆಯಲ್ಲಿ ಸಿಎಂ ಬೊಮ್ಮಾಯಿ
ಬೆಂಗಳೂರು: ಸರ್ಕಾರದ ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸುವುದನ್ನು ಮುಂದುವರೆಸಿರುವ ಸಿಎಂ ಬೊಮ್ಮಾಯಿ, ರಾಜ್ಯದ ಎಲ್ಲಾ ಸಿಇಒಗಳ ಸಭೆ ಬಳಿಕ ಇದೀಗ ಇಂದು ಶುಕ್ರವಾರ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ವಿಧಾನಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಬೊಮ್ಮಾಯಿ, ಜಿಲ್ಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಜಿಲ್ಲೆಗಳ ಅಭಿವೃದ್ಧಿಗೆ ಪ್ರಮುಖ ಆದ್ಯತೆ ನೀಡಬೇಕಾಗಿರುವುದು ಜಿಲ್ಲಾಧಿಕಾರಿಗಳೇ ಹೊರತು ಕೆಳಮಟ್ಟದ ಅಧಿಕಾರಿಗಳಲ್ಲ. ಸಬೂಬು ಹೇಳದೇ ಅಥವಾ ಎಲ್ಲ ಜವಾಬ್ದಾರಿ ಹೊಣೆಯನ್ನು ಅಧಿಕಾರಿಗಳಿಗೆ ವಹಿಸಿಬಿಟ್ಟರಾಯಿತೆಂಬ ಮನೋಭಾವ ಬಿಟ್ಟು ಖುದ್ದು ಜಿಲ್ಲಾಧಿಕಾರಿಗಳು ಅತ್ತ ಲಕ್ಷ್ಯವಹಿಸಬೇಕು. ಎಲ್ಲದರ ವರದಿ ಪಡೆಯಬೇಕೆಂದು ತಾಕೀತು ಮಾಡಿರುವ ಬಗ್ಗೆ ವರದಿಯಾಗಿದೆ.
ಡಿಸಿಗಳ ಜತೆ ಸಿಎಂ ಸಭೆ ನಡೆಸಿದ ಸಿಎಂ, ಅತಿವೃಷ್ಟಿಯಿಂದ ಬೆಳೆಹಾನಿ, ಮನೆಗಳ ಹಾನಿ ಬಗ್ಗೆ ಪರಾಮರ್ಶೆ ನಡೆಸಿದರು. ಜಿಲ್ಲೆಗಳಲ್ಲಿ ಅಧಿಕಾರಿಗಳು ಸೇವಕರಂತೆ ಕೆಲಸಮಾಡಬೇಕೇ ಹೊರತು ಬಾಸ್ನಂತೆ ಅಲ್ಲ. ಅಧಿಕಾರಿಗಳು ಮೊದಲು ಜನರ ಸೇವಕರೆನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕು. ಕಚೇರಿ ಬಿಟ್ಟು ಹೊರಬರಬೇಜು. ಜನರ ನಡುವೆ ಹೋಗಿ ಜನರ ಜತೆ ಕೆಲಸ ಮಾಡಿ, ಕೆಳಹಂತದ ಅಧಿಕಾರಿಗಳು ಡಿಸಿಗಳಂತೆ ವರ್ತಿಸಲು ಅವಕಾಶ ಕೊಡಬೇಡಿ ಎಂದು ಸೂಚಿಸಿದರು.
ಬೆಳೆಗಳ ಹಾನಿ, ಮನೆಗಳ ಹಾನಿಗೆ ಪರಿಹಾರ ಕೊಡದ ಡಿಸಿಗಳ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ ಸಿಎಂ, ಕೆಲಸ ಆಗಿಲ್ಲ ಎಂದು ಕೆಳಗಿನ ಅಧಿಕಾರಿಗಳ ಮೇಲೆ ಹಾಕಬೇಡಿ. ಕೆಲಸಗಳು ಆಗದಿರುವುದಕ್ಕೆ ನೀವೇ ಹೊಣೆ, ನಿಮ್ದೇ ಹೊಣೆಗಾರಿಕೆ ಎಂದು ಸಭೆಯಲ್ಲಿ ಡಿಸಿಗಳಿಗೆ ಸಿಎಂ ಕ್ಲಾಸ್ ತೆಗೆದುಕೊಂಡರೆನ್ನಲಾಗಿದೆ.