ದಲಿತ ರಾಜಕಾರಣಿಗಳ ತುಳಿದು ಮೇಲೆ ಬಂದಿರುವ ಸಿದ್ದರಾಮಯ್ಯಗೆ ದಲಿತರ ಮೇಲೆ ಪ್ರೀತಿ ಉಕ್ಕಿ ಹರಿಯತ್ತಿದೆ- ಬಿಜೆಪಿ

ಬೆಂಗಳೂರು, ಡಿ.31: ದಲಿತ ರಾಜಕಾರಣಿಗಳನ್ನು ತುಳಿದು ಮೇಲೆ ಬಂದಿರುವ ಇತಿಹಾಸವನ್ನು ಹೊಂದಿರುವ ಸಿದ್ದರಾಮಯ್ಯ ಅವರಿಗೆ ಇತ್ತೀಚೆಗೆ ದಲಿತರ ಮೇಲೆ ಪ್ರೀತಿ ಉಕ್ಕಿ ಹರಿಯತ್ತಿದೆ” ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, “ಸಿದ್ದರಾಮಯ್ಯ ಅವರು ಭಾರೀ ದಲಿತ ಪರವಾದ ಕಾಳಜಿ ತೋರ್ಪಡಿಸುತ್ತಿದ್ದಾರೆ. ದಲಿತ ರಾಜಕಾರಣಿಗಳನ್ನು ತುಳಿದು ಮೇಲೆ ಬಂದಿರುವ ಇತಿಹಾಸವನ್ನು ಹೊಂದಿರುವ ಸಿದ್ದರಾಮಯ್ಯ ಅವರಿಗೆ ಇತ್ತೀಚೆಗೆ ದಲಿತರ ಮೇಲೆ ಪ್ರೀತಿ ಉಕ್ಕಿ ಹರಿಯತ್ತಿದೆ. ದಲಿತರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸುವಷ್ಟು ಪ್ರೀತಿ ಇದೆಯೇ ಸಿದ್ದರಾಮಯ್ಯ?” ಎಂದು ಕೇಳಿದ್ದಾರೆ.

“ಮಾನ್ಯ ಸಿದ್ದರಾಮಯ್ಯನವರೇ, ಈ ಪ್ರಕರಣ ನಡೆದಾಗ ನೀವೇನು ಗಾಢ‌ ನಿದ್ದೆಯಲ್ಲಿದ್ದಿರಾ? ಪ್ರಕರಣ ನಡೆದ 24 ಗಂಟೆಯೊಳಗಾಗಿ ಕರ್ತವ್ಯಲೋಪ ಎಸಗಿದ ಪೊಲೀಸರನ್ನು ಅಮಾನತು ಮಾಡಲಾಗಿದೆ. ಹೇಳಿಕೊಟ್ಟ ಮಾತು, ಬರೆದು ಕೊಟ್ಟ ಟ್ವೀಟು ಎಷ್ಟು ದಿನ ಬಾಳಿಕೆ ಬರುತ್ತದೆ?” ಎಂದು ಪ್ರಶ್ನಿಸಿದ್ದಾರೆ. “ಕೊರಗ ಸಮುದಾಯ ಬಂಧುಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸಚಿವರು, ಕೇಂದ್ರ ಸಚಿವರು ತಕ್ಷಣವೇ ಸ್ಪಂದಿಸಿದ್ದಾರೆ. ಪ್ರಕರಣ ನಡೆದು ಕೆಲವು ದಿನಗಳಾದರೂ ನೀವು ಈಗ ಮಾತನಾಡುತ್ತಿರುವುದೇಕೆ? ದಲಿತರ ವಿಚಾರದಲ್ಲೂ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವ ಹುನ್ನಾರವೇ?” ಎಂದು ಕೇಳಿದ್ದಾರೆ.

“ಈ ರೀತಿಯ ಹೇಳಿಕೆಗಳ‌ ಮೂಲಕ ಒಂದು ಸಮುದಾಯದ ನೈತಿಕ ಶಕ್ತಿಯನ್ನು ಅಡಗಿಸುವುದು ಸಿದ್ದರಾಮಯ್ಯ ಅವರ ಉದ್ದೇಶವಾಗಿದೆ. ಒಂದು ಘಟನೆಯನ್ನು ವ್ಯವಸ್ಥಿತ ಷಡ್ಯಂತ್ರ, ಇತ್ಯಾದಿ ಎಂದು ಬಿಂಬಿಸಿ ಬೇಳೆ ಬೇಯಿಸಿಕೊಳ್ಳುವುದು ಎಷ್ಟು ಸೂಕ್ತ? ಎಲ್ಲದರಲ್ಲೂ ರಾಜಕೀಯ ಮಾಡುವುದೇ ಸಿದ್ದಹಸ್ತ ಸೂತ್ರ” ಎಂದಿದೆ. “ಹಿಂದುಗಳೆಲ್ಲ ಒಂದು ಎಂದು ಉದ್ಘೋಷಿಸುತ್ತಿರುವ ಬಿಜೆಪಿ ಬ್ರಾಂಡಿನ ಹಿಂದೂ ಧರ್ಮದಲ್ಲಿ ಕೊರಗ ಸಮುದಾಯ ಸೇರಿಲ್ಲವೇ? ದಲಿತರನ್ನು ಅಸ್ಪರ್ಶರನ್ನಾಗಿಯೇ ಉಳಿಸುವುದು ಇವರ ಗುಪ್ತ ಅಜೆಂಡಾವೇ?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು.

“ಹಿಂದುಗಳ ರಕ್ಷಣೆಗಾಗಿಯೇ ಅವತಾರವೆತ್ತಿ ಬಂದವರಂತೆ ಬೊಬ್ಬಿಡುತ್ತಿರುವ, ಸ್ಥಳೀಯ ಲೋಕಸಭಾ ಸದಸ್ಯರೂ ಆಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಮೌನವನ್ನು ಕೊರಗರ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಮೌನಸಮ್ಮತಿ ಎಂದು ಅರ್ಥೈಸೋಣವೇ?” ಎಂದು ಕೇಳಿದ್ದರು.

Leave a Reply

Your email address will not be published. Required fields are marked *

error: Content is protected !!