ಕೋವಿಡ್ ಲಸಿಕೆ: 15-18 ವರ್ಷ ವಯಸ್ಸಿನ ಮಕ್ಕಳ ನೋಂದಣಿ ಜ.1ರಿಂದ ಆರಂಭ
ನವದೆಹಲಿ: 15 ರಿಂದ 18 ವರ್ಷದೊಳಗಿನ ಹದಿಹರೆಯದವರು ತಮ್ಮ ವಿದ್ಯಾರ್ಥಿ ಗುರುತಿನ ಚೀಟಿಗಳನ್ನು ಬಳಸಿಕೊಂಡು ಜನವರಿ 1 ರಿಂದ ಕೋವಿನ್ ಅಪ್ಲಿಕೇಶನ್ನಲ್ಲಿ ಕೋವಿಡ್-19 ಲಸಿಕೆಗಳಿಗಾಗಿ ನೋಂದಾಯಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
ಈ ಕುರಿತು ಕೋವಿನ್ ಮುಖ್ಯಸ್ಥ ಡಾ. ಆರ್.ಎಸ್.ಶರ್ಮಾ ಅವರು ಮಾಹಿತಿ ನೀಡಿದ್ದು, 15-18 ವರ್ಷ ವಯಸ್ಸಿನ ಮಕ್ಕಳ ನೋಂದಣಿ ಜನವರಿ 1ರಿಂದ ಆರಂಭವಾಗಲಿದೆ. ಸಾಕಷ್ಟು ಮಕ್ಕಳು ಆಧಾರ್ ಕಾರ್ಡ್ ಹಾಗೂ ಇತರೆ ಗುರುತಿನ ಚೀಟಿಗಳನ್ನು ಹೊಂದಿಲ್ಲದ ಕಾರಣ, ನೋಂದಣಿಗಾಗಿ ಹೆಚ್ಚುವರಿಯಾಗಿ (10ನೇ) ವಿದ್ಯಾರ್ಥಿ ಗುರುತಿನ ಚೀಟಿಯನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಜನವರಿ 3 ರಿಂದ 15ರಿಂದ 18 ವರ್ಷ ವಯಸ್ಸಿನವರು ತಮ್ಮ ಮೊದಲ ಸುತ್ತಿನ ಕೋವಿಡ್ ಲಸಿಕೆಗಳನ್ನು ಪಡೆಯಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ (ಡಿಸೆಂಬರ್ 25) ಹೇಳಿದ್ದಾರೆ.
ಓಮಿಕ್ರಾನ್ನ ಆತಂಕದ ಮಧ್ಯೆಯೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬದಲಾದ ನಿಯಮಗಳೊಂದಿಗೆ 2007 ರ ಮೊದಲು ಜನಿಸಿದ ಎಲ್ಲರಿಗೂ ಜನವರಿ 1 ರಿಂದ ಲಸಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ. 15ರಿಂದ 18 ವರ್ಷದ ಮಕ್ಕಳಿಗೆ ದೇಶದಲ್ಲಿ ಲಸಿಕೆ ನೀಡುತ್ತೇವೆ. 3ನೇ ಜನವರಿ ಸೋಮವಾರದಿಂದ ಮಕ್ಕಳಿಗೆ ಲಸಿಕೆ ವಿತರಣೆ ಆರಂಭವಾಗಲಿದೆ. ಆರೋಗ್ಯ ಕಾರ್ಯಕರ್ತರಿಗೆ ಜನವರಿ 10ರಿಂದ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಹೇಳಿದ್ದರು. ಅಲ್ಲದೆ, ಓಮಿಕ್ರಾನ್ ಬಗ್ಗೆ ಆತಂಕಿತರಾಗಬೇಡಿ, ಆದರೆ ಎಚ್ಚರ ವಹಿಸಿ ಎಂದು ಕಿವಿಮಾತು ಹೇಳಿದ್ದರು.
ಶಾಲಾ, ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ವ್ಯಾಕ್ಸಿನ್ ನೀಡುತ್ತೇವೆ. ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಪ್ರಿಕಾಶನ್ ಡೋಸ್ (ಮುಂಜಾಗರೂಕತೆ ಲಸಿಕೆ) ನೀಡುತ್ತೇವೆ. ದೇಶದಲ್ಲಿ ಲಸಿಕಾಕರಣ ಪ್ರಕ್ರಿಯೆ ಆರಂಭವಾಗಿ 11 ತಿಂಗಳಾಗಿದೆ. ಸಾಮೂಹಿಕ ಇಚ್ಛಾಶಕ್ತಿಯಿಂದ ಕೊರೊನಾ ವಿರುದ್ಧ ನಾವು ಹೋರಾಟ ಮುಂದುವರಿಸಬೇಕಿದೆ. ದೇಶದಲ್ಲಿ ಈವರೆಗೆ 141 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಶೇ 61ರಷ್ಟು ಯುವಕರಿಗೆ ಲಸಿಕೆ ನೀಡಲಾಗಿದೆ. ಜನರನ್ನು ಆರೋಗ್ಯವಾಗಿ ಇರಿಸಲು ನಿರಂತರ ಶ್ರಮಿಸುತ್ತಿದ್ದೇವೆ. ಲಸಿಕಾ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದರು.
ಭಾರತದಲ್ಲಿನ ಮಕ್ಕಳಿಗೆ ಭಾರತ್ ಬಯೋಟೆಕ್ ಸಂಸ್ಥೆಯ ಡಬಲ್-ಡೋಸ್ ಕೋವಾಕ್ಸಿನ್ ಅಥವಾ ಝೈಡಸ್ ಕ್ಯಾಡಿಲಾ ಕಂಪೆನಿಯ ಮೂರು-ಡೋಸ್ ಝೈಕೋವ್-ಡಿ ಲಸಿಕೆ ನೀಡಲಾಗುತ್ತದೆ. ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್’ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಬಳಿಕ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗಿತ್ತು. ಮೇ.1ರಿಂದ 18-45 ವರ್ಷ ವಯಸ್ಸಿನ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ.
ದೇಶದ ವಯಸ್ಕ ಜನಸಂಖ್ಯೆಯ ಶೇಕಡಾ 61 ರಷ್ಟು ಜನರಿಗೆ ಕೋವಿಡ್ ಲಸಿಕೆಯ ಎರಡೂ ಡೋಸ್ಗಳನ್ನು ನೀಡಲಾಗಿದ್ದು, ಶೇಕಡಾ 90 ರಷ್ಟು ಜನರು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 1,41,70,25,654 ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.