ಉ.ಪ್ರದೇಶ: ಉದ್ಯಮಿ ಮನೆ, ಅಂಗಡಿ ಮೇಲೆ ಐಟಿ ದಾಳಿ, ಬರೋಬ್ಬರಿ 150 ಕೋಟಿ ರೂ. ವಶ!

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಉದ್ಯಮಿಯೊಬ್ಬರ ನಿವಾಸ, ಅಂಗಡಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಹಣವನ್ನು ವಶಕ್ಕೆ ಪಡೆದುಕೊಂಡಿದೆ.

ಕಾನ್ಪುರ, ಕನೌಜ್, ಮುಂಬೈ ಮತ್ತು ಗುಜರಾತಿನಲ್ಲಿರುವ ಸುಗಂಧ ದ್ರವ್ಯ ವ್ಯಾಪಾರಿ ಪಿಯೂಶ್ ಜೈನ್ ಮನೆ, ಕಾರ್ಖಾನೆ, ಕಚೇರಿ, ಕೋಲ್ಡ್ ಸ್ಟೋರ್ ಮತ್ತು ಪೆಟ್ರೋಲ್ ಪಂಪ್ ಗಳ ಮೇಲೆ ಐಟಿ ದಾಳಿ ನಡೆಸಿದೆ. ಕಾನ್ಪುರ, ಮುಂಬೈ ಮತ್ತು ಗುಜರಾತಿನಲ್ಲಿ ಏಕಕಾಲದಲ್ಲಿ ಆರಂಭವಾದ ದಾಳಿಗಳು ತಡರಾತ್ರಿ ಕೊನೆಗೊಂಡಿತು. ದಾಳಿ ವೇಳೆ 150 ಕೋಟಿ ರೂಪಾಯಿ ನಗದನ್ನು ಐಟಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಐಟಿ ದಾಳಿಯ ಜೊತೆಗೆ, ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ, ಅಹಮದಾಬಾದಿನ ಜಿಎಸ್ ಟಿ ಗುಪ್ತಚರ ಮಹಾನಿರ್ದೇಶನಾಲಯದ(ಡಿಜಿಜಿಐ) ಅಧಿಕಾರಿಗಳು ಗುರುವಾರ ಕಾನ್ಪುರದಲ್ಲಿ ಕಾರ್ಖಾನೆ ಆವರಣ ಮತ್ತು ಪಾನ್ ಮಸಾಲಾ ತಯಾರಕರು ಮತ್ತು ಸಾಗಣೆದಾರರ ಆವರಣದಲ್ಲಿ ಶೋಧ ನಡೆಸಿದರು.

ಆದಾಯ ತೆರಿಗೆ ತಂಡ ಮೊದಲು ಕರೆನ್ಸಿ ಎಣಿಕೆ ಯಂತ್ರದೊಂದಿಗೆ ಪಿಯೂಶ್ ಜೈನ್ ಅವರ ಆನಂದಪುರಿ ನಿವಾಸಕ್ಕೆ ತಲುಪಿತು. ಮುಂಬೈ ಮತ್ತು ಗುಜರಾತಿನಲ್ಲಿರುವ ಜೈನ್ ಸಂಸ್ಥೆಗಳ ಮೇಲೆ ಇದೇ ರೀತಿಯ ದಾಳಿಗಳು ನಡೆದಿವೆ. ಅಧಿಕಾರಿಗಳ ಪ್ರಕಾರ ಸುಮಾರು 150 ಕೋಟಿ ರೂಪಾಯಿ ತೆರಿಗೆ ವಂಚನೆ ಪ್ರಕರಣ ಬಯಲಿಗೆ ಬಂದಿದೆ. ಈ ತೆರಿಗೆ ವಂಚನೆಯನ್ನು ಮುಖ್ಯವಾಗಿ ಶೆಲ್ ಕಂಪನಿಗಳ ಮೂಲಕ ಮಾಡಲಾಗುತ್ತಿತ್ತು.

ಆನಂದಪುರಿ ನಿವಾಸಿ ಪಿಯೂಶ್ ಜೈನ್ ಮೂಲತಃ ಕನೌಜಿನ ಛಿಪಟ್ಟಿಗೆ ಸೇರಿದವರು. ಅವರು ಕನೌಜಿನಲ್ಲಿ ಮನೆ, ಸುಗಂಧ ದ್ರವ್ಯ ಕಾರ್ಖಾನೆ, ಕೋಲ್ಡ್ ಸ್ಟೋರ್, ಪೆಟ್ರೋಲ್ ಪಂಪ್ ಹೊಂದಿದ್ದಾರೆ. ಪಿಯೂಶ್ ಜೈನ್ ಮುಂಬೈನಲ್ಲಿ ಮನೆ, ಮುಖ್ಯ ಕಚೇರಿ ಮತ್ತು ಶೋರೂಮ್ ಅನ್ನು ಸಹ ಹೊಂದಿದ್ದಾರೆ. ಅವರ ಕಂಪನಿಗಳೂ ಮುಂಬೈನಲ್ಲಿಯೇ ನೋಂದಣಿಯಾಗಿವೆ.

Leave a Reply

Your email address will not be published. Required fields are marked *

error: Content is protected !!