ಸಿದ್ದರಾಮಯ್ಯ ಈಗಲೂ ನನ್ನ ಗುರುಗಳು, ನಾನು ಅವರ ಅಭಿಮಾನಿ- ರಮೇಶ್ ಜಾರಕಿಹೊಳಿ
ಬೆಳಗಾವಿ: ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈಗಲೂ ನಮ್ಮ ನಾಯಕರೇ ಎನ್ನುವ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಸ್ವತಂತ್ರ ಅಭ್ಯರ್ಥಿ, ಸೋದರ ಲಖನ್ ಜಾರಕಿಹೊಳಿ ಪರ ಬಿಜೆಪಿಯಲ್ಲಿರುವ ರಮೇಶ್ ಜಾರಕಿಹೊಳಿ ರಾಯಬಾಗ ಪಟ್ಟಣದಲ್ಲಿ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ನನ್ನ ಗುರು, ಈಗಲೂ ಗುರುಗಳೇ. ಆದರೆ ಈಗ ಅವರು ಸುಳ್ಳು ಹೇಳುವುದನ್ನು ಕಲಿಯುತ್ತಿದ್ದಾರೆ. ಅವರನ್ನು ಬಹಳ ಬಹಳ ಟೀಕಿಸಲಾರೆ ಎಂದಿದ್ದಾರೆ.
ಸಿದ್ದರಾಮಯ್ಯ ಅವರು ನನ್ನ ಬಗ್ಗೆ ಮಾತನಾಡಿದ್ದು ಅದಕ್ಕೆ ಉತ್ತರ ಕೊಡಲು ಬಂದಿದ್ದೆ, ಆದರೆ ಅವರು ನನ್ನ ಗುರು. ಮನೆಯಲ್ಲಿ ಬಹಳ ಮಾತನಾಡಬೇಡಿ ಎಂದಾಗ ನಾನು ಟೀಕಿಸಲು ಹೋಗಲ್ಲ. ಮೊದಲಿನ ಸಿದ್ದರಾಮಯ್ಯ ನೇರ ನಿಷ್ಠುರ ಹಾಗೂ ಮಾತನಾಡಿದರೆ ಹೆದರುವಂತೆ ಇತ್ತು. ಈಗಿನ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಅದು ಬದಲಾಗಬೇಕಿದೆ ಎಂದು ರಮೇಶ್ ಜಾರಕಿಹೊಳಿ ಮೃದು ಮಾತುಗಳಲ್ಲೇ ಮಾತಿನ ಚಾಟಿ ಬೀಸಿದರು.
ನಾನು ಕೋಲ್ಹಾಪೂರ ಮಹಾಲಕ್ಷ್ಮಿ ದೇವಿಯ ಮೇಲೆ ಆಣೆ ಮಾಡಿ ಹೇಳ್ತೀನಿ. ವಿವೇಕರಾವ್ ಪಾಟೀಲ್ ಕಾಂಗ್ರೆಸ್ ಪಕ್ಷದ ಸದಸ್ಯರು. ಕಳೆದ ವಿಧಾನಪರಿಷತ್ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ವಿವೇಕರಾವ್ ಪಾಟೀಲ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೂಡುವಂತೆ ಕೇಳಿಕೊಂಡಿದ್ದೆ. ಆದರೆ ವೀರಕುಮಾರ್ ಪಾಟೀಲ್ ಅವರಿಗೆ ಟಿಕೆಟ್ ನೀಡಿದರು.
ವಿವೇಕರಾವ್ ಪಾಟೀಲ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಂದರು. ನಂತರ ಸಿದ್ದರಾಮಯ್ಯನವರು ವಿವೇಕರಾವ್ ಪಾಟೀಲ್ ಗೆ ನಮ್ಮ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುವಂತೆ ನನ್ನ ಬಳಿ ಹೇಳಿದ್ದರು. ಆದರೆ ವಿವೇಕರಾವ್ ಪಾಟೀಲ್ಗೂ ಕಾಂಗ್ರೆಸ್ಗೂ ಸಂಬಂಧವಿಲ್ಲ ಅಂತ ಸುಳ್ಳು ಹೇಳುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ನಿಂದ ಕುರುಬರಿಗೆ ಮೂರು ಜನರಿಗೆ ಟಿಕೆಟ್ ಕೊಟ್ಟಿದ್ದೇವೆ. ನೀವು ಎಷ್ಟು ಜನರಿಗೆ ಟಿಕೆಟ್ ಕೊಟ್ಟಿದ್ದೀರಿ, ನೀವು ಆಡಿದ್ದೇ ಆಟ ಅಂದುಕೊಂಡಿದ್ದೀರಾ ರಮೇಶ್ ಜಾರಕಿಹೊಳಿ. ರಾಜಕೀಯ ಅಂದ ಮೇಲೆ ಸಿದ್ದಾಂತದ ಮೇಲೆ ಮಾಡುವುದು. ಸ್ವಾರ್ಥಕ್ಕಾಗಿ, ಹೆದರಿಸಿ, ಬೆದರಿಸಿ ರಾಜಕಾರಣ ಮಾಡುವುದಲ್ಲ ಸರಿಯಲ್ಲ ಎಂದು ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ವಾಳಿ ನಡೆಸಿದ್ದರು.