ಡಿಕೆಶಿ ಭಂಡಾಸುರ, ಸಿದ್ದರಾಮಯ್ಯ ಮಂಡಾಸುರ: ಸಿಎಂ ಖುರ್ಚಿಗಾಗಿ ಇಬ್ಬರು ಅಸುರರ ಕಚ್ಚಾಟ- ಶ್ರೀರಾಮುಲು ವ್ಯಂಗ್ಯ
ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಭಂಡಾಸುರ ಹಾಗೂ ಮಂಡಾಸುರರು ಎಂದು ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ಚಿತ್ರದುರ್ಗದ ಎಂಎಲ್ಸಿ ಚುನಾವಣಾ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 400 ಲೋಕಸಭೆ ಸದಸ್ಯರಿದ್ದ ಕಾಂಗ್ರೆಸ್ ಈಗ 50ಕ್ಕೆ ತಲುಪಿದೆ. ಇಂತಹ ವೇಳೆ ಬಿಜೆಪಿ ಮುಳುಗುತ್ತಿರುವ ಹಡಗು ಎಂದು ಬಂಡಾಸುರ ಡಿಕೆಶಿ ಹೇಳಿದ್ದಾರೆಂದು ಟೀಕಿಸಿದರು. ಮುಂದಿನ ವಿಧಾನಸಭಾ ಚುನಾವಣೆಯ ಬಳಿಕ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಕಾಂಗ್ರೆಸ್ನಲ್ಲಿ ಭಂಡಾಸುರ (ಡಿ.ಕೆ.ಶಿವಕುಮಾರ್) ಹಾಗೂ ಮೊಂಡಾಸುರರ (ಸಿದ್ದರಾಮಯ್ಯ) ನಡುವೆ ಕಚ್ಚಾಟ ನಡೆಯುತ್ತಿದೆ. ತಮ್ಮ ಒಳಜಗಳ ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ದಯನೀಯ ಸ್ಥಿತಿಯಲ್ಲಿದೆ. ಮುಂಬರುವ ವಿಧಾನಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದು ಭ್ರಮೆ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರವಾಗಿ ಮಾತನಾಡಿ ದೊಡ್ಡ ನಾಯಕರಾಗಲು ಪೈಪೋಟಿ ನಡೆಸುತ್ತಿದ್ದಾರೆ. ಇದಕ್ಕೆ ಚುನಾವಣೆಯಲ್ಲಿ ಮತದಾರರು ಪಾಠ ಕಲಿಸಲಿದ್ದಾರೆ’ ಎಂದರು.
‘ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಇಲ್ಲ. ಎಲ್ಲ ನಾಯಕರೂ ಒಗ್ಗೂಡಿ ಚುನಾವಣೆ ಎದುರಿಸುತ್ತಿದ್ದೇವೆ. ವಿಧಾನಪರಿಷತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದು ಕಾಂಗ್ರೆಸ್ಗೆ ತಿರುಗೇಟು ನೀಡುತ್ತೇವೆ. ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು