ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧೆ- ಎರಡು ಮೂರು ದಿನಗಳಲ್ಲಿ ನಿರ್ಣಯ: ಡಾ.ಎಮ್.ಎನ್ ರಾಜೇಂದ್ರ ಕುಮಾರ್

ಉಡುಪಿ ನ.10 (ಉಡುಪಿ ಟೈಮ್ಸ್ ವರದಿ): ಮುಂಬರುವ ಡಿ.10 ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಸಹಕಾರಿ ರಂಗದ ಧುರೀಣ ಡಾ.ಎಮ್ ಎನ್ ರಾಜೇಂದ್ರ ಕುಮಾರ್ ಅವರು ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಇದೀಗ ಈ ವಿಚಾರವಾಗಿ ಖುದ್ದು ಡಾ.ಎಮ್.ಎನ್ ರಾಜೇಂದ್ರ ಕುಮಾರ್ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವಂತೆ ಜನರು ಒತ್ತಡ ಹಾಕುತ್ತಿದ್ದಾರೆ. ಈ ಬಗ್ಗೆ ಮುಂದಿನ ಎರಡು ಮೂರು ದಿನಗಳಲ್ಲಿ ನಿರ್ಣಯ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಈ ವೇಳೆ ಯಾವುದೇ ಪಕ್ಷದಿಂದ ತಾನು ಸ್ಪರ್ಧೆ ಮಾಡುವುದಿಲ್ಲ ಎಂದ ಅವರು, ಸ್ಪರ್ಧೆ ಮಾಡುವುದಾದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ.

ತನಗೆ ಚುನಾವಣೆ ಸ್ಪರ್ಧಿಸಿ ಎಂದು ಹೇಳುತ್ತಿದ್ದಾರೆಯೇ ವಿನಹ ಇಂತಹ ಪಕ್ಷದಿಂದ ಸ್ಪರ್ಧಿಸಿ ಎಂದು ಯಾರೂ ಒತ್ತಡ ಹಾಕಿಲ್ಲ. ಸಹಕಾರಿ ರಂಗದಲ್ಲಿರುವ 50% ದಷ್ಟು ಮಂದಿ ಪಂಚಾಯತ್ ಸದಸ್ಯರಾಗಿದ್ದಾರೆ. ಈ ಪೈಕಿ 30 ಶೆ. ದಷ್ಟು ಮಹಿಳೆಯರಿದ್ದಾರೆ  ಹಾಗಾಗಿ ಸಹಕಾರಿ ರಂಗದವರಿಗೆ ಪ್ರಾತಿನಿಧ್ಯ ಸಿಗಲಿ ಎಂಬ ಕಾರಣಕ್ಕೆ ಅವರು ಚುನಾವಣೆಗೆ ನಿಲ್ಲುವಂತೆ ಒತ್ತಡ ಹೇರುತ್ತಿದ್ದಾರೆ. ನಾನು ಯಾವುದೇ ಪಕ್ಷವನ್ನು ಪ್ರತಿನಿಧಿಸದೆ ಬಡ ಜನರ, ಸಹಕಾರಿಗಳ, ಸ್ವ-ಸಹಾಯ ಗುಂಪುಗಳ ಪರವಾಗಿ ಕೆಲಸ ಮಾಡುತ್ತೇನೆ ಎಂದರು.

ಸಹಕಾರಿ ಸಂಘಗಳ ನಿರ್ದೇಶಕರು ಮತ್ತು ವಿವಿಧ ಪಂಚಾಯತ್ ಸದಸ್ಯರು ಡಾ. ರಾಜೇಂದ್ರ ಕುಮಾರ್ ಅವರನ್ನು ಭೇಟಿಯಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ತಾವು ನಿಲ್ಲಬೇಕು ಎನ್ನುವ ಒತ್ತಡ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. 25 ವರ್ಷಗಳಂದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಎಂ.ಎನ್ ರಾಜೇಂದ್ರ ಕುಮಾರ್ ಅವರು, ಸಹಕಾರಿ ರಂಗದಲ್ಲಿ ಅತ್ಯದ್ಭುತ ಸೇವೆಯನ್ನು ಸಲ್ಲಿಸಿರುವ ವ್ಯಕ್ತಿಯಾಗಿದ್ದಾರೆ. ರಾಜಕೀಯ ರಹಿತವಾದ ಇವರ ಸೇವೆ ಹಾಗೂ ಸಹಕಾರಿ ನಿರ್ದೇಶಕರೇ ಅತೀ ಹೆಚ್ಚಾಗಿ ಪಂಚಾಯತ್ ಸದಸ್ಯರಾಗಿರುವುದರಿಂದ ಡಾ.ಎಮ್ ಎನ್ ಆರ್. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆಂಬ ಸಹಕಾರಿಗಳ ಒತ್ತಡವು ಹೆಚ್ಚಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿದೆ.

Leave a Reply

Your email address will not be published. Required fields are marked *

error: Content is protected !!