ಕ್ರೈಸ್ತರಿಗೆ ಕಿರುಕುಳ: ಸಂತ್ರಸ್ತರ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಖಂಡನಾರ್ಹ- ಪಿಎಫ್’ಐ
ಬೆಂಗಳೂರು: ಬೆಳಗಾವಿಯ ಮರಾಠಾ ಕಾಲನಿಯಲ್ಲಿ ಸಂವಿಧಾನದತ್ತ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಹತ್ತಿಕ್ಕಿ, ನೈತಿಕ ಪೊಲೀಸ್ ಗಿರಿ ನಡೆಸಿದ ಶ್ರೀರಾಮಸೇನೆಯ ಕೃತ್ಯ ಮತ್ತು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದ ಪೊಲೀಸ್ ಇಲಾಖೆಯ ಕ್ರಮವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಅಯ್ಯೂಬ್ ಅಗ್ನಾಡಿ ತೀವ್ರವಾಗಿ ಖಂಡಿಸಿದ್ದಾರೆ. ಪ್ರಾರ್ಥನೆಯಲ್ಲಿ ನಿರತರಾಗಿದ್ದ ಪಾದ್ರಿ, ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 200ಕ್ಕೂ ಅಧಿಕ ಮಂದಿಯನ್ನು ಮತಾಂತರ ನೆಪದಲ್ಲಿ ಅಕ್ರಮವಾಗಿ ಬಂಧನದಲ್ಲಿ ಇರಿಸಿರುವುದು ಕ್ರಿಮಿನಲ್ ಅಪರಾಧವಾಗಿದೆ. ಗೂಂಡಾಗಿರಿ ನಡೆಸಿ ಸಮಾಜದ ಶಾಂತಿ ಸುವ್ಯವಸ್ಥೆ ಕದಡುವ ದುಷ್ಕರ್ಮಿಗಳನ್ನು ಬಂಧಿಸುವ ಬದಲಾಗಿ ಪೊಲೀಸರು ಸಂತ್ರಸ್ತರ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಖಂಡನಾರ್ಹ.
ಭಾರತವು ವಿವಿಧ ಧರ್ಮಗಳನ್ನು ಹೊಂದಿದ್ದು, ಬಹುತ್ವ ಸಂಸ್ಕೃತಿ ಇರುವ ಜಾತ್ಯತೀತ ರಾಷ್ಟ್ರವಾಗಿದೆ. ಹಾಗಾಗಿ ಸಂವಿಧಾನವು ಪ್ರಜಾತಂತ್ರ ವ್ಯವಸ್ಥೆಯಡಿ ಎಲ್ಲ ನಾಗರಿಕರಿಗೂ ಆಯ್ಕೆಯ ಧರ್ಮವನ್ನು ಆಚರಿಸುವ, ಸ್ವೀಕರಿಸುವ ಧಾರ್ಮಿಕ ಸ್ವಾತಂತ್ರ್ಯವನ್ನೂ ನೀಡಿದೆ. ಇದು ಪ್ರತಿಯೊಬ್ಬ ಭಾರತೀಯನ ಮೂಲಭೂತ ಹಕ್ಕು ಆಗಿದ್ದು, ಇದನ್ನು ಹತ್ತಿಕ್ಕುವುದು ಕಾನೂನು ಉಲ್ಲಂಘನೆಯ ಕೃತ್ಯವಾಗಿದೆ. ಬೆಳಗಾವಿಯಲ್ಲಿ ಕ್ರೈಸ್ತ ಪಾದ್ರಿ ಮತ್ತು ಪ್ರಾರ್ಥನಾ ನಿರತರ ಮೇಲೆ ದಾಂಧಲೆ ನಡೆಸಿದ ದುಷ್ಕೃತ್ಯವನ್ನು ಗಂಭೀರ ಅಪರಾಧವಾಗಿ ಪರಿಗಣಿಸಬೇಕಾಗಿದ್ದ ಪೊಲೀಸರು ಕರ್ತವ್ಯ ಲೋಪವೆಸಗಿದ್ದಾರೆ.
ಸಂಘಪರಿವಾರದ ಇಂತಹ ಕೃತ್ಯಗಳು ರಾಜ್ಯಾದ್ಯಂತ ವರದಿಯಾಗುತ್ತಿದ್ದರೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರವು ಸಂಪೂರ್ಣ ವಿಫಲವಾಗಿದೆ. ಮಾತ್ರವಲ್ಲದೆ ಪರೋಕ್ಷ ಬೆಂಬಲ ನೀಡುವ ರೀತಿಯಲ್ಲಿ ಹೇಳಿಕೆಯನ್ನೂ ನೀಡುತ್ತಿದೆ. ಇದು ಸೌಹಾರ್ದ ಕರ್ನಾಟಕವನ್ನು ಇನ್ನೊಂದು ಯುಪಿ ಮಾದರಿಯಾಗಿಸುವ ಅಪಾಯವಿದ್ದು, ನಾಗರಿಕ ಸಮಾಜ ಇದರ ವಿರುದ್ಧ ದನಿಯೆತ್ತಬೇಕು ಎಂದು ಪಾಪ್ಯುಲರ್ ಫ್ರಂಟ್ ಕರೆ ನೀಡುತ್ತದೆ. ಆಡಳಿತ ವ್ಯವಸ್ಥೆ ಮತ್ತು ಪ್ರಭುತ್ವದ ದೌರ್ಜನ್ಯದ ವಿರುದ್ಧ ಕಾನೂನು ಸಮರ ನಡೆಸುವಲ್ಲಿ ಸಂತ್ರಸ್ತರು ಹಿಂಜರಿಯಬಾರದು ಎಂದು ಅಯ್ಯೂಬ್ ಅಗ್ನಾಡಿ ಕೇಳಿಕೊಂಡಿದ್ದಾರೆ.