ಕನ್ನಡಿಗರ ಕಣ್ಮಣಿ ‘ಅಪ್ಪು’ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನತ್ತ ಹರಿದು ಬರುತ್ತಿರುವ ಜನ ಸಾಗರ
ಬೆಂಗಳೂರು: ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರು ಇನ್ನಿಲ್ಲಿ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ನಾಡಿನ ಮೂಲೆ ಮೂಲೆಯಿಂದ ಬೆಂಗಳೂರಿನತ್ತ ಧಾವಿಸಿ ಬರುತ್ತಿರುವ ಲಕ್ಷಾಂತರ ಅಭಿಮಾನಿಗಳ ದಂಡು ನಗರದ ಕಂಠೀರವ ಸ್ಟೇಡಿಯಂಗೆ ಭೇಟಿ ನೀಡುತ್ತಿದ್ದು, ಪಾರ್ಥೀವ ಶರೀರದ ಅಂತಿಮ ದರ್ಶನ ನಡೆಯುತ್ತಿದ್ದಾರೆ.
ಕಂಠೀರವ ಸ್ಟೇಡಿಯಂನಲ್ಲಿ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದ್ದು, ಜತೆಗೆ ಸ್ಯಾಂಡಲ್ ವುಡ್ ಸೇರಿ ಭಾರತೀಯ ಚಿತ್ರರಂಗದ ವಿವಿಧ ಗಣ್ಯರು, ರಾಜಕೀಯ ನಾಯಕರು ಸೇರಿದಂತೆ ವಿವಿಧ ಕ್ಷೇತ್ರಗಳ ಪುನೀತ್ ಅವರ ಸ್ನೇಹಿತರು, ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿದ ಅಗಲಿದ ನಟನ ದರ್ಶನ ಪಡೆದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ನಿನ್ನೆ ರಾತ್ರಿ 7 ಗಂಟೆಗೆ ಕಂಠೀರವ ಕ್ರೀಡಾಂಗಣಕ್ಕೆ ಪುನೀತ್ ಅವರ ಪಾರ್ಥಿವ ಶರೀರವನ್ನು ತರುತ್ತಲೇ ಅಭಿಮಾನಿಗಳು ದುಃಖದ ಕಟ್ಟೆ ಸ್ಫೋಟಗೊಂಡತ್ತು. ಅಪ್ಪೂ, ಪುನೀತಣ್ಣ, ಸಾರ್ ಮತ್ತೆ ಹುಟ್ಟಿ ಬನ್ನಿ ಹೀಗೆ ಘೋಷಣಗಳು ಮುಗಿಲು ಮುಟ್ಟಿದ್ದವು. ನೂಕು ನುಗ್ಗಲಲ್ಲೇ ಸಾಗಿ ಅಪ್ಪುಗೆ ಅಂತಿಮ ನಮನ ಸಲ್ಲಿಸಿದರು.
ಡಾ.ರಾಜ್ ಸಮಾಧಿ ಪಕ್ಕವೇ ಅಂತ್ಯಕ್ರಿಯೆ?
ಡಾ.ರಾಜ್ ಕುಮಾರ್ ಅವರ ಸಮಾಧಿ ಇರುವ ರಾಜಧಾನಿಯ ಕಂಠೀರವ ಸ್ಟುಡಿಯೋ ಆವರಣದಲ್ಲೇ ನಟ ಪುನೀತ್ ರಾಜ್ ಕುಮಾರ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಕಂಠೀರವ ಸ್ಟುಡಿಯೋ ಆವರಣದಲ್ಲಿ ನಡೆಸಲು ಪುನೀತ್ ಅವರ ಕುಟುಂಬ ವರ್ಗದೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಭಾನುವಾರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಗಳಿದ್ದು, ಈ ಬಗ್ಗೆ ಅಧಿಕೃತ ಘೋಷಣೆಗಳು ಬಾಕಿ ಇದೆ. ಅಮೆರಿಕಾದಲ್ಲಿರುವ ಪುನೀತ್ ರಾಜ್ ಕುಮಾರ್ ಅವರ ಹಿರಿಯ ಪುತ್ರಿ ಧೃತಿ ಅವರು ಶನಿವಾರ ನಗರಕ್ಕೆ ವಾಪಸ್ಸಾಗುವ ಸಾಧ್ಯತೆಗಳಿವೆ.
ಹೆಚ್ಚುತ್ತಿರುವ ಅಭಿಮಾನಿ ಸಮೂಹ:
ರಾತ್ರಿಯಿಡೀ ನೆಚ್ಚಿನ ನಾಯಕನ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸಮಯ ಕಳೆದಂತೆ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಇಂದು ಬೆಳಗಾಗುತ್ತಿದ್ದಂತೆ ಮತ್ತಷ್ಟು ಜನ ಕಂಠೀರವ ಸ್ಟೂಡಿಯೋ ಕಡೆಗೆ ಮುಖಮಾಡಿದ್ದು, ರಾಜ್ಯ, ಅಂತಾರಾಜ್ಯಗಳಿಂದ ಜನರು ಕಂಠೀರವ ಸ್ಟುಡಿಯೋದತ್ತ ಬರುತ್ತಿದ್ದಾರೆ.
ಪೊಲೀಸ್ ಭದ್ರತೆ:
ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿರುವ ಹಿನ್ನೆಲೆಯಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹಾವೇರಿ, ಹುಬ್ಬಳ್ಳಿಯಿಂದ ರಿಸರ್ವ್ ಪೊಲೀಸರನ್ನು ಕರೆತಂದು ಇಲ್ಲಿ ನಿಯೋಜನೆ ಮಾಡಲಾಗಿದೆ. ನಿನ್ನೆ ರಾತ್ರಿಯೇ 200 ಪೊಲೀಸರು ಬಂದಿಳಿದಿದ್ದಾರೆ.
ಪಾರ್ಕಿಂಗ್ ವ್ಯವಸ್ಥೆ
ಕಂಠೀರವ ಸ್ಟುಡಿಯೋ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಪೊಲೀಸರು ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಈ ಕುರಿತು ಬೆಂಗಳೂರು ಸಿಟಿ ಪೊಲೀಸ್ ಮಾಹಿತಿ ನೀಡಿದ್ದು, ವಿಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಕಾಲೇಜು ಆಟದ ಮೈದಾನ ಮತ್ತು ನೃಪತುಂಗ ರಸ್ತೆಯ ವೈಎಂಸಿಎ ಗ್ರೌಂಡ್ ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.ಸಾರ್ವಜನಿಕರು ತಮ್ಮ ವಾಹನಗಳನ್ನು ಸೇಂಟ್ ಜೋಸೆಫ್ ಕಾಲೇಜು ಆಟದ ಮೈದಾನ ಮತ್ತುನೃಪತುಂಗ ರಸ್ತೆಯ ವೈಎಂಸಿಎ ಮೈದಾನದಲ್ಲಿ ಮಾತ್ರ ನಿಲ್ಲಿಸುವಂತೆ ಮನವಿ ಮಾಡಿಕೊಂಡಿದೆ.