ಪಾರ್ಶ್ವವಾಯುಗೆ ತಕ್ಷಣ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಪಡಿಸಬಹುದು- ಡಾ.ಶರತ್ ಕುಮಾರ್

ಮಣಿಪಾಲ, ಅ.29 (ಉಡುಪಿ ಟೈಮ್ಸ್ ವರದಿ): ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ನರವಿಜ್ಞಾನ ವಿಭಾಗದ ವತಿಯಿಂದ ನಿಮಿಷಗಳು ಜೀವ ಉಳಿಸಬಹುದು ಎಂಬ ಘೋಷ ವಾಕ್ಯದೊಂದಿಗೆ ಪಾರ್ಶ್ವವಾಯು ಜಾಗೃತಿ ಮತ್ತು ಉಚಿತ ತಪಾಸಣಾ ಕಾರ್ಯಕ್ರಮ ಇಂದು ಕೆಎಂಸಿ ಆಸ್ಪತ್ರೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕೆ.ಎಂ.ಸಿ. ಆಸ್ಪತ್ರೆಯ ಡೀನ್ ಡಾ. ಶರತ್ ಕುಮಾರ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ” ಇತ್ತೀಚಿನ ಸಮೀಕ್ಷೆ ಪ್ರಕಾರ ಜಗತ್ತಿನಲ್ಲಿ ಪ್ರತೀ ನಾಲ್ಕು ಜನರಲ್ಲಿ ಒಬ್ಬರಿಗೆ ತಮ್ಮ ಜೀವಮಾನದಲ್ಲಿ ಪಾರ್ಶ್ವವಾಯು ಆಗುವ ಸಾಧ್ಯತೆ ಇದೆ.  ಅಂಕಿ ಅಂಶಗಳ ಪ್ರಕಾರ ಪಾರ್ಶ್ವವಾಯು ಹೊಂದಿದ  25%  ಜನರು ಒಂದು ತಿಂಗಳಲ್ಲಿ ಮರಣ ಹೊಂದುತ್ತಾರೆ, 35% ಜನ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗುತ್ತಾರೆ ಮತ್ತು ಉಳಿದ ಜನರಲ್ಲಿ ಕೆಲವರಿಗೆ ಪಾರ್ಶ್ವವಾಯು ಆಗಿದೆ ಎಂಬುದೇ ಗೊತ್ತಾಗುವುದಿಲ್ಲ. ಆದ್ದರಿಂದ ಪಾರ್ಶ್ವವಾಯುಗೆ ತುತ್ತಾದ ತಕ್ಷಣ ನರರೋಗ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ಗುಣಪಡಿಸಬಹುದು. ಈ ಸಂದರ್ಭದಲ್ಲಿ ಪ್ರತೀ ನಿಮಿಷ ಕೂಡ ಅಮೂಲ್ಯವಾದದ್ದು ಎಂದರು.

ಗೌರವ ಅತಿಥಿಯಾಗಿ ಭಾಗವಹಿಸಿದ್ದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು ಮಾತನಾಡಿ, ಐ ಸಿ ಎಂ ಆರ್ ವರದಿ ಪ್ರಕಾರ ಭಾರತದಲ್ಲಿ ಮನುಷ್ಯರ ಸಾವಿಗೆ ಪಾರ್ಶ್ವವಾಯು 4ನೇ ದೊಡ್ಡ ಕಾರಣ ಹಾಗೂ ಶಾಶ್ವತ ಅಂಗವೈಕಲ್ಯಕ್ಕೆ 5ನೇ ದೊಡ್ಡ ಕಾರಣ. ಆದ್ದರಿಂದ ಆರಂಭದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡಯಬೇಕು. ಈ ನಿಟ್ಟಿನಲ್ಲಿ ನಾಳೆ ಕೂಡಾ ಆಸ್ಪತ್ರೆಯಲ್ಲಿ ಉಚಿತವಾಗಿ ಪಾರ್ಶ್ವವಾಯು ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದು ಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮುಖ್ಯ ನಿರ್ವಹಣಾ ಅಧಿಕಾರಿ ಸಿ.ಜಿ ಮುತ್ತಣ್ಣ, ನರರೋಗ ವಿಭಾಗದ ಮುಖ್ಯಸ್ಥರಾದ ಡಾ. ಅಪರ್ಣ ಆರ್ ಪೈ, ನರ ರೋಗ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಗಿರೀಶ್ ಮೆನನ್ ಆರ್,ಡಾ. ಅಪರ್ಣ  ಪೈ, ಡಾ. ಗಿರೀಶ್ ಮೆನನ್, ಡಾ. ನಿಶಾ ಶೆಣೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!