ಕಾಣೆಯಾಗಿದೆ ಸಾರ್ವಜನಿಕರ ಕಡತ! ಉಡುಪಿ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ…

ಉಡುಪಿ ಅ.29 (ಉಡುಪಿ ಟೈಮ್ಸ್ ವರದಿ): ಉಡುಪಿ ನಗರ ಸಭೆಯ ಸಾಮಾನ್ಯ ಸಭೆ ಇಂದು ನಗರ ಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆಯಿತು.

ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ನಗರ ಸಭೆಯಲ್ಲಿ ಸಾರ್ವಜನಿಕರ ಕಡತಗಳು ಬದಲಾವಣೆ ಹಾಗೂ ಕಾಣೆಯಾಗಿರುವ ವಿಚಾರಕ್ಕೆ ಸಂಬಂಧಿಸಿ ಚರ್ಚೆಗಳು ನಡೆದವು. ಈ ವೇಳೆ ಅಡಳಿತ ಪಕ್ಷದ ಸದಸ್ಯ ಪ್ರಭಾಕರ ಪೂಜಾರಿ ಅವರು ಮಾತನಾಡಿ, ಒಂದು ವಿಭಾಗದ ಕಡತಗಳು ಕಾಣೆಯಾಗಿ ಸಂಬಂಧವೇ ಇಲ್ಲದ ಇನ್ನೊಂದು ವಿಭಾಗದಲ್ಲಿ ಪತ್ತೆಯಾಗುತ್ತದೆ. ಈ ರೀತಿ ಕಡತ ಬದಲಾವಣೆ ಯಾಕಾಗುತ್ತದೆ ಮತ್ತು ಕಡತಗಳು ಹೇಗೆ ಕಾಣೆಯಾಗುತ್ತದೆ ಎಂದು ಪ್ರಶ್ನಿಸಿದರು.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಗರ ಸಭಾ ವಿಪಕ್ಷ ನಾಯಕ ರಮೇಶ್ ಕಾಂಚನ್ ಅವರು, ವಿನಾ ಕಾರಣ ಕಡತಗಳ ವಿಲೇವಾರಿಗೆ ವಿಳಂಬ ಮಾಡಲಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಬಂದಾಗ ಫೈಲ್ ಮಿಸ್ ಆಗಿದೆ ಇನ್ನೊಂದು ಸಬೂಬ್ ನೀಡುತ್ತಾರೆ. ಯಾವುದೇ ಕಡತಗಳು ನಗರ ಸಭೆಗೆ ಬಂದಾಗ ಅದು ಅದೇ ವಿಭಾಗದ ಮತ್ತೊಂದು ಹಂತಕ್ಕೆ ವರ್ಗಾ ಆಗುತ್ತದೆ. ಆದರೆ ಇಲ್ಲಿ ಕಡತಗಳು ನಾಪತ್ತೆಯಾಗುತ್ತಿದೆ. ನಗರ ಸಭೆಯ ಸದಸ್ಯರು ನೀಡಿರುವ ಕಡತವೇ ನಾಪತ್ತೆಯಾಗುತ್ತಿರುವಾಗ ಸಾರ್ವಜನಿಕರ ಪಾಡೇನು ಎಂದು ಪ್ರಶ್ನಿಸಿದರು.

ಶ್ರೀಕೃಷ್ಣ ಮಠದ ಪಾರ್ಕಿಂಗ್ ಏರಿಯಾದ ಗೂಡಂಗಡಿ ಹಾಗೂ ಅದಮಾರು ಮಠದ ಓಣಿ ಬಳಿಯ ಸಾರ್ವಜನಿಕ ರಸ್ತೆಗೆ ಅನಧಿಕೃತ ಗೇಟ್ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿ ವಿಪಕ್ಷ ಹಾಗೂ ಆಡಳಿತ ಪಕ್ಷದ ನಡುವೆ ಗಲಾಟೆ ಕದ್ದಲದ ಗೂಡಾಗಿತ್ತು. ಸಭೆಯಲ್ಲಿ ನಗರ ಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಅವರು ಆಡಳಿತ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಉಡುಪಿ ಕೃಷ್ಣಮಠದ ಪಾರ್ಕಿಂಗ್ ಏರಿಯಾದಲ್ಲಿ ಪ್ರವಾಸಿಗರಿಗಾಗಿ ನಗರ ಸಭೆ ರಸ್ತೆ ಮಾಡಿ ವಿದ್ಯುತ್ ದೀಪಗಳನ್ನು ಅಳವಡಿಸಿದೆ. ಈ ಎಲ್ಲಾ ಕಾರ್ಯಗಳು ನಗರ ಸಭೆಯ ಅನುದಾನದಿಂದ ನಡೆದಿದ್ದು ಇದು ನಗರ ಸಭೆಗೆ ಸೇರಿದ್ದಾಗಿದೆ. ಹೀಗಿರುವಾಗ ಅಲ್ಲಿ ಗೂಡಂಗಡಿಗಳು ಯಾರ ಅನುಮತಿ ಪಡೆದು ನಿರ್ಮಾಣಗೊಂಡಿದೆ ಎಂದು ಪ್ರಶ್ನಿಸಿದರು.

ಆಡಳಿತ ಮತ್ತು ವಿಪಕ್ಷಗಳ ಕೋಲಾಹಲದ ನಡುವೆಯೇ ಇದಕ್ಕೆ ಪ್ರತಿಕ್ರಿಯೆ ನೀಡಿದ ನಗರಸಭೆ ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ ಅವರು ಪ್ರವಾಸೋದ್ಯಮದ ದೃಷ್ಟಿಯಿಂದ 1 ವರ್ಷದ ಅವಧಿಗೆ ತಾತ್ಕಾಲಿಕವಾಗಿ ಗೂಡಂಗಡಿ ತೆರೆಯಲು ಅನುಮತಿ ನೀಡಲಾಗಿದೆ. ಈ ಹಿಂದೆ ಕೂಡಾ ಅಲ್ಲಿ ಗೂಡಂಗಡಿ ಇತ್ತು. ಇದರಿಂದ ನಗರ ಸಭೆಗೆ ಯಾವುದೇ ಆದಾಯ ಇರುವುದಿಲ್ಲ. ಇದರ ಸಂಪೂರ್ಣ ನಿರ್ವಹಣೆಯನ್ನು ಶ್ರೀ ಕೃಷ್ಣಾ ಸೇವಾ ಸಮಿತಿ ಟ್ರಸ್ಟ್ ನೋಡಿಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ನಗರ ಸಭಾ ವಿಪಕ್ಷ ನಾಯಕ ರಮೇಶ್ ಕಾಂಚನ್ ಅವರು ಮಾತನಾಡಿ, ತಾವು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹಿನ್ನೆಲೆ ಶುಭಾಶಯ ಕೋರಿ ಅಭಿಮಾನಿಗಳಿಂದ ಹಾಕಲಾದ ಕಟೌಟ್ ನ್ನು ಮಂಜು ಎಂಬವರು ತೆರವು ಗೊಳಿಸಲು ನಗರಸಭೆಗೆ ಸೂಚಿಸಿದ ವಿಚಾರಕ್ಕೆ ಸಂಬಂಧಿಸಿ ಆಕ್ರೋಶ ವ್ಯಕ್ತಪಡಿಸಿದ ಅವರು, ಕಟೌಟ್ ತೆರವುಗೊಳಿಸುವುದಾದರೆ ನಗರ ಸಭೆ ತೆರವು ಗೊಳಿಸಬೇಕಿತ್ತು. ಆದರೆ ನಗರ ಸಭೆಗೆ ಸಂಬಂಧ ಪಡದ ವ್ಯಕ್ತಿ “ಮಂಜು” ಎಂಬವರು ತೆರವು ಗೊಳಿಸಲು ಸೂಚನೆ ನೀಡಲು ಅವರೇನು ಪೌರಾಯುಕ್ತರಾ, ಪೌರ ಕಾರ್ಮಿಕರಾ ಅಥವಾ ನಗರ ಸಭಾ ಸದಸ್ಯರಾ ಎಂದು ಪ್ರಶ್ನಿಸಿದರು, ಹಾಗೂ ಇದೇ ವೇಳೆ ನಗರ ಸಭಾ ಆಡಳಿತ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ನಗರ ಸಭೆಯಲ್ಲಿ ಆಡಳಿತ ಯಾರು ಮಾಡುತ್ತಿದ್ದಾರೆ..? ಮಾಜಿ ನಗರ ಸಭಾ ಸದಸ್ಯರು ಆಡಳಿತ ಮಾಡುತ್ತಿದ್ದಾರಾ..? ಎಂಬ ಗಂಭೀರವಾಗಿ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ನಗರ ಸಭಾ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅವರು, ಕಟೌಟ್ ನಿಮ್ಮದೊಬ್ಬರದ್ದೇ ಅಲ್ಲ.. ಅವಧಿ ಮುಗಿದ ಎಲ್ಲರ ಕಟೌಟ್ ಗಳನ್ನು ತೆರವುಗೊಳಿಸಲಾಗಿದೆ ಎಂದು ಉತ್ತರಿಸಿದರು.

Leave a Reply

Your email address will not be published. Required fields are marked *

error: Content is protected !!