ಕೋಟ: ಕಾಲು ಜಾರಿ ಬಿದ್ದು ಸೆಂಟ್ರಿಂಗ್ ಕಂಟ್ರ್ಯಾಕ್ಟ್’ರ್ ಸಾವು
ಕೋಟ ಅ.28 (ಉಡುಪಿ ಟೈಮ್ಸ್ ವರದಿ): ಮನೆಯೊಂದರ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತೆಕ್ಕಟ್ಟೆ ಗ್ರಾಮದ ಮಲ್ಯಾಡಿಯಲ್ಲಿ ನಡೆದಿದೆ.
ಶ್ರೀನಿವಾಸ (39) ಮೃತಪಟ್ಟವರು. ಇವರು ಸೆಂಟ್ರಿಂಗ್ ಕಂಟ್ರ್ಯಾಕ್ಟ್ ಕೆಲಸ ಮಾಡಿಕೊಂಡಿದ್ದು, ನಿನ್ನೆ ತೆಕ್ಕಟ್ಟೆ ಗ್ರಾಮದ ಮಲ್ಯಾಡಿಯ ಕರುಣಾಕರ ಶೆಟ್ಟಿ ಕೆದೂರು ಎಂಬವರ ಮನೆಯ ಸೆಂಟ್ರೀಂಗ್ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ತೀವ್ರಸ್ವರೂಪದ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು,ಅಲ್ಲಿನ ವೈದ್ಯರ ಸಲಹೆ ಮೇರೆಗೆ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.