‘ಮ್ಯಾನ್ ಆಫ್ ದ ಮ್ಯಾಚ್’ ವೇಟ್ ಆಂಡ್ ವಾಚ್
ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯ ಪ್ರಕಾಶ್ ಅವರು ಸಿನಿಮಾ ಮಾಡುತ್ತಾರೆ ಎಂದಾಗ ಪ್ರೇಕ್ಷಕರ ಕುತೂಹಲ ಸಹಜವಾಗಿಯೇ ಹೆಚ್ಚಿರುತ್ತದೆ. ಯಾಕೆಂದರೆ ಅವರು ಪ್ರೇಕ್ಷಕರು ಗರಿಷ್ಠವಾಗಿ ನಿರೀಕ್ಷಿಸಿರುವುದಕ್ಕಿಂತಲೂ ಹೆಚ್ಚಿನದನ್ನು ತಮ್ಮ ಸಿನಿಮಾದಲ್ಲಿ ನೀಡುತ್ತಿದ್ದು, ನೋಡಿದವರು ಛೇ, ಸಿನಿಮಾ ಮುಗಿಯಿತೇ? ಇನ್ನಷ್ಟು ಹೊತ್ತು ಇರಬೇಕಿತ್ತು ಎಂದು ಹೇಳುವಂತೆ ದೃಶ್ಯ ಹಾಗೂ ಮನೋರಂಜನೆಯನ್ನು ಕಟ್ಟಿ ಕೊಡುತ್ತಿದ್ದಾರೆ.
ಇಂಥ ಸತ್ಯಪ್ರಕಾಶ್ ಅವರು ಈಗ ಪುನೀತ್ ರಾಜ್‌ಕುಮಾರ್ ಜತೆಗೆ ಸೇರಿಕೊಂಡು ‘ಮ್ಯಾನ್ ಆಫ್ ದ ಮ್ಯಾಚ್’ ಸಿನಿಮಾ ಮಾಡಿದ್ದು, ಇದು ಅಮೆಜಾನ್ ಪ್ರೈಮ್ ಒಟಿಟಿ ಪ್ಲಾಟ್ ಫಾರಂನಲ್ಲಿ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇನ್ನೂ ಖಚಿತ ದಿನಾಂಕ ನಿಗದಿ ಮಾಡಿಲ್ಲವಾದರೂ ಈಗಲೇ ಪ್ರೇಕ್ಷಕರು ಆ ಸಿನಿಮಾ ನೋಡಲೇ ಬೇಕು ಎಂದು ನಿರ್ಧರಿಸಿದ್ದಾರೆ. ಇದುವರೆಗಿನ ಮಾಧ್ಯಮ ವರದಿ, ಲಭ್ಯ ವಿಮರ್ಶೆ, ಸಿನಿಮಾ ಕ್ಷೇತ್ರದಲ್ಲಿ ಪರಿಣಿತರಾದವರು ಈ ಹೊಸ ಸಿನಿಮಾದ ಬಗ್ಗೆ ಹಾಗೂ ನಿರ್ದೇಶಕರ ಬಗ್ಗೆ ಹೊಂದಿರುವ ಉತ್ತಮ ಅಭಿಪ್ರಾಯ… ಮುಂತಾದವು ಸಿನಿಮಾಸಕ್ತರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.
ಮುಖ್ಯವಾಗಿ ಈ ಸಿನಿಮಾದ ಹೆಚ್ಚಿನ ಕಲಾವಿದರು ಹೊಸಬರು. ಅದರೆ ಅವರ ನಟನಾ ಹಿನ್ನೆಲೆ ಹಾಗೂ ಪ್ರತಿಭೆಯ ಬಗ್ಗೆ ಬೆಳಕು ಚೆಲ್ಲಿದಾಗ ಅಲ್ಲಿ ಹೊಳೆಯುವ ರತ್ನಗಳ ರಾಶಿಯೇ ಕಾಣ ಸಿಗುತ್ತದೆ. ಜತೆಗೆ ಈ ಹೊಸ ಸಿನಿಮಾದಲ್ಲಿ ತಮ್ಮ ನಟನಾ ಭವಿಷ್ಯವನ್ನು ಭದ್ರವಾಗಿಸಿಕೊಳ್ಳಬೇಕೆಂದು ಅವರು ಸಹಜವಾಗಿಯೇ ಶಕ್ತಿ ಮೀರಿದ ಶ್ರಮ ಹಾಕಿರುತ್ತಾರೆ. ಅಂಥ ಪರಿಶ್ರಮಿ ಯುವ ಕಲಾವಿದರು ಸಮರ್ಥ ನಿರ್ದೇಶಕ ಸತ್ಯ ಪ್ರಕಾಶ್ ಕೈಯಲ್ಲಿ ಸರಿಯಾಗಿ ದುಡಿಸಲ್ಪಟ್ಟು ಒಂದು ಅತಿಶ್ರೇಷ್ಠ ಸಿನಿಮಾದ ಹುಟ್ಟಿಗೆ ಕಾರಣರಾಗಿದ್ದಾರೆ ಎಂಬುದು ಹೆಚ್ಚಿನ ಸಿನಿಮಾ ವಿಮರ್ಶಕರ ಅಭಿಪ್ರಾಯ.
ಕಥೆಯೇ ಭಿನ್ನ: ಈ ಸಿನಿಮಾದ ಗಮನ ಸೆಳೆಯುವ ಅತಿ ಮುಖ್ಯ ವಿಷಯ ಏನೆಂದರೆ ಇದರ ಕಥೆ. ಇದು ಸಿನಿಮಾದಲ್ಲಿ ನಟಿಸುವ ಆಸೆ ಹೊತ್ತು ಆಡಿಷನ್ ಬರುವವರ ಸುತ್ತ ಕೇಂದ್ರೀಕೃತವಾದ ಕಥೆಯನ್ನು ಹೊಂದಿದೆ. ಸಿನಿಮಾ ನಟನಾಗಬೇಕು ಎಂಬ ಆಸೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ, ಅವಿದ್ಯಾವಂತರಿಂದ ಹಿಡಿದು ಸುಶಿಕ್ಷಿತರವರೆಗೂ ಇದೆ. ಕನಸು ಕಾಣಲು ಯಾವುದೇ ನಿರ್ಬಂಧವಿಲ್ಲ. ಅದಕ್ಕೆ ಪ್ರಾಯ, ಲಿಂಗ, ಅಂತಸ್ತು ಭೇದವೂ ಇಲ್ಲ. ಸಿನಿಮಾ ನಟನಾಗುವ ಕನಸನ್ನು ನನಸು ಮಾಡಲು ಆಡಿಷನ್ ಗೆಲ್ಲಲು ಆಕಾಂಕ್ಷಿಗಳು ಎಷ್ಟು ಶ್ರಮ ಪಡುತ್ತಾರೆ? ಆಡಿಷನ್‌ನಲ್ಲಿ ಎಷ್ಟು ಮಂದಿ ಆಯ್ಕೆಯಾಗುತ್ತಾರೆ? ಸಿನಿಮಾ ಜಗತ್ತಿಗೆ ಪ್ರವೇಶಿಸುವ ಮೊದಲು ನಮ್ಮ ನಟನಟಿಯರೆಲ್ಲ ಎಷ್ಟು ಕಷ್ಟಪಟ್ಟಿರುತ್ತಾರೆ ಮುಂತಾದ ಎಲ್ಲಾ ಪ್ರಶ್ನೆಗಳಿಗೂ ಈ ಸಿನಿಮಾ ಉತ್ತರ ನೀಡುತ್ತದೆ. ಅಂದ ಹಾಗೆ ಸಿನಿಮಾ ಕಲಾವಿದರಾಗಬೇಕು ಎಂದು ಬಯಸುವ ಎಲ್ಲರೂ ನೋಡಲೇಬೇಕಾದ ಒಂದು ಅತ್ಯುತ್ತಮ ಸಿನಿಮಾ ಇದಾಗಿದೆ.
ಥಿಯೇಟರ್‌ನಲ್ಲೇ ಸಿಗಬೇಕಿತ್ತು ಈಗ ಈ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಆದರೆ ಇಂಥದ್ದೊಂದು ಅತ್ಯುತ್ತಮ ಸಿನಿಮಾವು ಥಿಯೇಟರ್‌ನ ದೊಡ್ಡ ಪರದೆಯಲ್ಲೇ ಬಿಡುಗಡೆಯಾಗಬೇಕಿತ್ತು. ಅದನ್ನು ದೊಡ್ಡ ಪರದೆಯಲ್ಲಿ ನೋಡಲು ಸಾಧ್ಯವಿರುತ್ತಿದ್ದರೆ ಅದರ ಖುಷಿ ಅವರ್ಣನೀಯವಾಗಿರುತ್ತಿತ್ತು ಎಂಬ ಅಭಿಪ್ರಾಯ ಹೆಚ್ಚಿನವರಿಂದ ಕೇಳಿ ಬರುತ್ತಿದೆ.