| ಉಡುಪಿ ಅ.25(ಉಡುಪಿ ಟೈಮ್ಸ್ ವರದಿ): ಬಾಡಿಗೆ ಪಾವತಿಸದೆ ವಂಚಿಸುತ್ತಿದ್ದ ನಗರ ಸಭೆಯ ವಾಣಿಜ್ಯ ಕಟ್ಟಡದ ಅಂಗಡಿಗಳಿಗೆ ನಗರಸಭೆ ಅಧಿಕಾರಿಗಳಿಂದ ಬೀಗ.
ಉಡುಪಿಯ ಸಿಟಿ ಮತ್ತು ಸರ್ವಿಸ್ ಬಸ್ ನಿಲ್ದಾಣದ ಸಮೀಪದ ಒಟ್ಟು 8 ಅಂಗಡಿಗಳಿಗೆ ನಗರ ಸಭೆ ಬೀಗ ಹಾಕಿದ್ದು, ಈ ಪೈಕಿ ಉಡುಪಿ ನಗರ ಸರ್ವಿಸ್ ಬಸ್ ನಿಲ್ದಾಣದಲ್ಲಿನ ನಗರ ಸಭೆಗೆ ಸೇರಿದ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಚರಿಸುತ್ತಿರುವ 7 ಅಂಗಡಿಗಳು ಹಾಗೂ ಸಿಟಿ ಬಸ್ ನಿಲ್ದಾಣದಲ್ಲಿ ಕಾರ್ಯಚರಿಸುತ್ತಿರುವ 1 ಅಂಗಡಿ ಕೋಣೆಗೆ ನಗರ ಸಭೆ ಬೀಗ ಹಾಕಿದೆ.
ಈ ಪೈಕಿ ಕೆಲವು ಅಂಗಡಿಗಳ ಮಾಲಿಕರು ಹಲವಾರು ತಿಂಗಳಿನಿಂದ ನಗರ ಸಭೆಗೆ ಬಾಡಿಗೆ ಕಟ್ಟದೇ ವ್ಯವಹಾರ ನಡೆಸುತ್ತಿದ್ದರೆ ಮತ್ತೆ ಕೆಲವರು ವರುಷಗಳಿಂದ ಬಾಡಿಗೆ ಪಾವತಿಸದೇ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ನಗರ ಸಭೆಯ ವಾಣಿಜ್ಯ ಕಟ್ಟಡದಲ್ಲಿನ ಹೆಚ್ಚಿನ ಅಂಗಡಿಗಳನ್ನು ಒಳಬಾಡಿಗೆಗೆ ನೀಡಲಾಗಿದೆOಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ನಗರ ಸಭೆಗೆ ತಿಂಗಳಿಗೆ 5000 ರೂ. ಪಾವತಿಸಿ, ಅದನ್ನು ತಿಂಗಳಿಗೆ 50,000 ಕ್ಕೆ ಒಳ ಬಾಡಿಗೆಗೆ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಸಾರ್ವಜನಿಕವಾಗಿ ಕೇಳಿಬರುತ್ತಿದೆ.
ಹರಾಜು ಪ್ರಕ್ರಿಯೆ ಮೂಲಕ ನಗರ ಸಭೆಯ ವಾಣಿಜ್ಯ ಕಟ್ಟಡದಲ್ಲಿ ವಾಣಿಜ್ಯ ವ್ಯಹಾರಗಳಿಗೆ ಪರವಾನಿಗೆ ಪಡೆದ ಅಂಗಡಿ ಮಾಲಕರು ಒಳಬಾಡಿಗೆ ನೀಡುತ್ತಿದ್ದಾರೆ. ಈ ಒಳ ಬಾಡಿಗೆಯಿಂದ ಮೊತ್ತ ಸಂಗ್ರಹಿಸಿದರೂ ಅದನ್ನು ನಗರ ಸಭೆಗೆ ಕಟ್ಟದೆ ವಂಚಿಸುತ್ತಿದ್ದಾರೆ. ಅಲ್ಲದೆ ಪರವಾನಿಗೆ ಒಂದು ಅಂಗಡಿಗೆ ಪಡೆದರೂ ವಿವಿಧ ಆರ್ಥಿಕ ವ್ಯವಹಾರ ನಡೆಸುತ್ತಿದ್ದಾರೆ. ಈ ಬಗ್ಗೆ ನಗರ ಸಭೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಇನ್ನಾದರೂ ಈ ಬಗ್ಗೆ ನಗರ ಸಭೆ ಅಧಿಕಾರಿಗಳು ಪರಿಶೀಲನೆ ನಡೆಸಿ ಅರ್ಹರಿಗೆ ವಾಣಿಜ್ಯ ವ್ಯವಹಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
| |