ಕರ್ನಾಟಕದಲ್ಲೂ ಡೆಲ್ಟಾ ರೂಪಾಂತರಿ AY 4.2 ವೈರಸ್ ತಳಿ ಪತ್ತೆ!

ಬೆಂಗಳೂರು: ಈ ಹಿಂದೆ ಬ್ರಿಟನ್ ನಲ್ಲಿ ಪತ್ತೆಯಾಗಿದ್ದ ಡೆಲ್ಟಾ ರೂಪಾಂತರಿಯ ಹೊಸ ತಳಿ AY 4.2 ಇದೀಗ ಕರ್ನಾಟಕದಲ್ಲೂ ಪತ್ತೆಯಾಗಿದೆ.

ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯನ್ವಯ ಕರ್ನಾಟಕದಲ್ಲಿ ಎರಡು AY 4.2 ತಳಿ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇದು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚಿನ ವೇಗದಲ್ಲಿ ಪ್ರಸರಣವಾಗುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ.

‘ಗ್ಲೋಬಲ್‌ ಇನಿಷಿಯೇಟಿವ್‌ ಆನ್‌ ಅಲ್‌ ಇನ್‌ಫ್ಲುಯೆಂಜಾ ಡಾಟಾ’ ವರದಿ ಪ್ರಕಾರ ಈ AY 4.2 ತಳಿ ಸೋಂಕು ಪ್ರಕರಣಗಳು ಆಂಧ್ರಪ್ರದೇಶದಲ್ಲಿ 7, ಕೇರಳದಲ್ಲಿ 4, ಕರ್ನಾಟಕ ಮತ್ತು ತೆಲಂಗಾಣದಲ್ಲಿ ತಲಾ 2, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 1 ಪತ್ತೆಯಾಗಿವೆ ಎಂದು ಹೇಳಲಾಗಿದೆ. ಇದಕ್ಕೂ ಮುನ್ನ ಈ ರೂಪಾಂತರಿ ಮಧ್ಯಪ್ರದೇಶದಲ್ಲಿ ಪತ್ತೆಯಾಗಿತ್ತು, ಆ ಮೂಲಕ ದೇಶದಲ್ಲಿ ಈ AY 4.2 ತಳಿ ಸೋಂಕು ಪ್ರಕರಣಗಳ ಸಂಖ್ಯೆ ಒಟ್ಟು 17ಕ್ಕೆ ಏರಿಕೆಯಾಗಿದೆ. ಇದಕ್ಕೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಇತ್ತೀಚೆಗೆ ಪತ್ತೆಯಾದ 7 ಪ್ರಕರಣಗಳನ್ನೂ ಸೇರಿಸಿದರೆ ಭಾರತದ 7 ರಾಜ್ಯಗಳಲ್ಲಿ ಒಟ್ಟು 24 ಕೇಸುಗಳು ಪತ್ತೆಯಾದಂತೆ ಆಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ತಜ್ಞರ ಜೊತೆ ಚರ್ಚಿಸಿದ್ದೇವೆ: ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್‌ ಅವರು, ‘ರಷ್ಯಾ, ಇಂಗ್ಲೆಂಡ್‌ಗಳಲ್ಲಿ ಮಾತ್ರವಲ್ಲದೆ ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲೂ ಕೊರೋನಾದ ಹೊಸ ತಳಿ ಬಂದಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ರಾಜ್ಯದ ಹಿರಿಯ ತಜ್ಞರು ಹಾಗೂ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚೆ ನಡೆಸಿದ್ದೇವೆ. ಈ ತಳಿ ಕಂಡುಬಂದಲ್ಲಿ ಸರ್ಕಾರದ ಗಮನಕ್ಕೆ ತರಬೇಕೆಂದು ಸೂಚನೆ ನೀಡಿದ್ದೇವೆ ಎಂದು ಹೇಳಿದ್ದಾರೆ.

ವಿಶ್ವಾದ್ಯಂತ ಪ್ರಕರಣ ಪತ್ತೆ: ಇನ್ನು ಜಗತ್ತಿನಾದ್ಯಂತ ಈ ಎವೈ 4.2 ಸೋಂಕು ಪ್ರಕರಣಗಳ ಸಂಖ್ಯೆ 18,207ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಬ್ರಿಟನ್‌ ಒಂದರಲ್ಲೇ 16,891 ಸೋಂಕು ಪ್ರಕರಣಗಳಿವೆ. 

Leave a Reply

Your email address will not be published. Required fields are marked *

error: Content is protected !!