ಸರಕಾರಕ್ಕೆ ಚರ್ಚ್‌ಗಳ ಮಾಹಿತಿ ಸಂಗ್ರಹಣೆಯ ಅಧಿಕಾರವಿಲ್ಲ,ಇದು ಖಾಸಗಿ ಹಕ್ಕಿನ ಉಲ್ಲಂಘನೆ- ಪಿಎಫ್’ಐ
ರಾಜ್ಯದಲ್ಲಿರುವ ಚರ್ಚ್ ಗಳ ಮೇಲೆ ಗೂಢಾಚಾರಿಕೆ ನಡೆಸಿ ಮಾಹಿತಿ ಸಂಗ್ರಹಿಸಿರುವ ಆತಂಕಕಾರಿ ವಿಚಾರ ಬಯಲಾಗಿದ್ದು, ಇದು ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯದ ಹರಣವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಅಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಹೇಳಿದ್ದಾರೆ.
ಬಿಜೆಪಿ ಸರಕಾರವು ಸಂವಿಧಾನ ವಿರೋಧಿಯಾಗಿರುವ ಮತಾಂತರ ನಿಷೇಧ ಕಾಯ್ದೆ ಜಾರಿ ತರಲು ಉತ್ಸುಕವಾಗಿದೆ. ಚರ್ಚ್ ಗಳ ಸಮೀಕ್ಷೆ ಈ ದುಷ್ಟ ಯೋಜನೆಯ ಒಂದು ಭಾಗವಾಗಿದೆ. ಸರಕಾರದ ಅಧೀನದ ಅಲ್ಪಸಂಖ್ಯಾತರ ನಿರ್ದೇಶನಾಲಯವು ರಾಜ್ಯದಲ್ಲಿರುವ ಚರ್ಚ್ ಗಳ ಬಗ್ಗೆ ಸಮೀಕ್ಷೆ ನಡೆಸಲು ಆದೇಶಿಸಿತ್ತು. ಅದರಂತೆ ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆಯ ಮೂಲಕ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಸುತ್ತಿರುವ ವಿಚಾರ ಬಹಿರಂಗವಾಗಿದೆ. ಕರ್ನಾಟಕ ಅಲ್ಪಸಂಖ್ಯಾತರ ಆಯೋಗ ಕಾಯಿದೆ 1994ರ ಪ್ರಕಾರ, ಯಾವುದೇ ನಿಬಂಧನೆಯಲ್ಲದೇ ರಾಜ್ಯ ಸರಕಾರಕ್ಕೆ ಚರ್ಚ್‌ಗಳ ಮಾಹಿತಿ ಸಂಗ್ರಹ ಮತ್ತು ನಿರ್ವಹಣೆ ಮಾಡುವ ಅಧಿಕಾರವಿಲ್ಲ. ಮಾತ್ರವಲ್ಲ, ಇದು ಸಂವಿಧಾನದ 14 ಮತ್ತು 21ನೇ ವಿಧಿಯಡಿ ದೊರೆತಿರುವ ಸಮಾನತೆ ಮತ್ತು ಖಾಸಗಿ ಹಕ್ಕಿನ ಉಲ್ಲಂಘನೆಯಾಗಲಿದೆ.
ಬಿಜೆಪಿ ಸರಕಾರವು ಕ್ರೈಸ್ತ ಸಮುದಾಯದ ಮೇಲೆ ದ್ವೇಷ ಸಾಧಿಸುತ್ತಿರುವುದು ಇದು ಮೊದಲೇನಲ್ಲ. 2008ರಲ್ಲಿ ನಡೆದ ರಾಜ್ಯಾದ್ಯಂತ ನಡೆದ ಸರಣಿ ಚರ್ಚ್ ದಾಳಿಯ ಮೂಲಕ ಕ್ರೈಸ್ತರಲ್ಲಿ ಅಭದ್ರತೆಯ ಭಾವನೆಯನ್ನು ಸೃಷ್ಟಿಸಲಾಗಿತ್ತು. ಬಜರಂಗ ದಳದವು ಈ ದುಷ್ಕೃತ್ಯಕ್ಕೆ ನೇರ ಹೊಣೆಯಾಗಿದ್ದರೂ, ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಸೂಕ್ತ ಶಿಕ್ಷೆಗೊಳಪಡಿಸದೇ ಸಂತ್ರಸ್ತ ಸಮುದಾಯಕ್ಕೆ ಅನ್ಯಾಯ ಎಸಲಾಗಿತ್ತು. ಇದೀಗ ಮತ್ತೇ ಮತಾಂತರದ ಹೆಸರಿನಲ್ಲಿ ಕ್ರೈಸ್ತರ ಪ್ರಾರ್ಥನಾಲಯಗಳ ಮೇಲೆ ವಿವಿಧ ಕಡೆಗಳಲ್ಲಿ ಸಂಘಪರಿವಾರದ ಸಂಘಟನೆಗಳು ದಾಳಿ ನಡೆಸುತ್ತಿರುವುದು ವರದಿಯಾಗುತ್ತಿದೆ.
ರಾಜ್ಯ ಸರಕಾರವು ಕ್ರೈಸ್ತ ಸಮುದಾಯದ ವಿರುದ್ಧ ನಡೆಸುತ್ತಿರುವ ಅನ್ಯಾಯ, ತಾರತಮ್ಯ ಮತ್ತು ದ್ವೇಷದ ಕ್ರಮವನ್ನು ತಕ್ಷಣ ನಿಲ್ಲಿಸಬೇಕು. ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸಲು ನ್ಯಾಯಾಂಗವು ಕೂಡಲೇ ಮಧ್ಯಪ್ರವೇಶಿಸಬೇಕು. ಚರ್ಚ್ ಗಳ ಸಮೀಕ್ಷೆಗೆ ಸೂಚನೆ ನೀಡಿರುವ ಬಿಜೆಪಿ ಸರಕಾರದ ಸಂವಿಧಾನ ವಿರೋಧಿ ನಡೆಯ ವಿರುದ್ಧ ಧ್ವನಿ ಎತ್ತಲು ಎಲ್ಲಾ ಸಮುದಾಯಗಳು ಮುಂದೆ ಬರಬೇಕೆಂದು ಯಾಸಿರ್ ಹಸನ್ ಕರೆ ನೀಡಿದ್ದಾರೆ.