ಬಿಜೆಪಿಗರು ಅತ್ಯಾಚಾರಿಗಳನ್ನು ಮಗ್ಗುಲಲ್ಲೇ ಇಟ್ಟುಕೊಂಡು ಮಾತನಾಡಬೇಕಾ: ಬೇಳೂರು
ಶಿವಮೊಗ್ಗ: ಬಿಜೆಪಿಯಲ್ಲೇ ಕೊಳೆತು ನಾರುತ್ತಿದೆ, ಅದನ್ನು ನೋಡುವುದು ಬಿಟ್ಟು, ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಕಾಂಗ್ರೆಸ್ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಟೀಕಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ನಮ್ಮ ರಾಷ್ಟ್ರೀಯ ನಾಯಕರ ಬಗ್ಗೆ ನಳಿನ್ ಕುಮಾರ್ ಕಟೀಲ್ ಹಗುರವಾಗಿ ಮಾತನಾಡಿ, ನಾಲಗೆಯನ್ನು ಹೊರಹಾಕಿದ್ದಾರೆ. ಇದನ್ನು ನಾನು ಖಂಡನೆ ಮಾಡುತ್ತೇನೆ, ವಿಧಾನಸೌಧದಲ್ಲಿ ಬ್ಲೂಫಿಲಂ ನೋಡಿದವರು ಬಿಜೆಪಿಯಲ್ಲಿ ಇದ್ದಾರೆ. ರೇಪ್ ಕೇಸಿನಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಕಿಹಾಕಿಕೊಂಡ ಮಂತ್ರಿಗಳು ಇರುವುದು ಬಿಜೆಪಿಯಲ್ಲಿ”ಎಂದು ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಬಗ್ಗೆ ನಳಿನ್ ಕುಮಾರ್ ಕಟೀಲ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಬೇಳೂರು. ಅವರದೇ ಪಕ್ಷದ ನಾಯಕರೆನ್ನಿಸಿಕೊಂಡವರು, ವಿಧಾನಸಭೆಯಲ್ಲಿ ಬ್ಲೂ ಫಿಲಂ ನೋಡಿದ್ದಾರೆ. ಬಿಜೆಪಿಯಲ್ಲೇ ಅತ್ಯಾಚಾರಿಗಳಿದ್ದಾರೆ. ಅವರೇ ಹಲವು ಸ್ಕ್ಯಾಂಡಲ್ಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇಂಥವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಇವೆಲ್ಲದರ ಬಗ್ಗೆ ಗೊತ್ತಿರುವ ಕಟೀಲು, ನಮ್ಮ ಕೇಂದ್ರ ನಾಯಕರ ಬಗ್ಗೆ ಟೀಕೆ ಮಾಡಿದ್ದಾರೆ. ಒಬ್ಬ ರಾಜ್ಯಾಧ್ಯಕ್ಷನಾಗಿ ಅವರ ಹೇಳಿಕೆ ಸರಿಯಲ್ಲ ಎಂದು ಕಿಡಿಕಾರಿದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ರಾಸಾಯನಿಕ ಗೊಬ್ಬರ ದಾಸ್ತಾನು ಇಲ್ಲ ಆದರೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ರಾಸಾಯನಿಕ ಗೊಬ್ಬರಗಳು ಬ್ಲಾಕ್ ಮಾರ್ಕೆಟ್ ಗೆ ಹೇಗೆ ಪ್ರವೇಶಿಸುತ್ತವೆ? ಅವುಗಳ ಬೆಲೆ ಗಗನಕ್ಕೇರಿದೆ ಎಂದರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿ ಮತ್ತು ಬಿಜೆಪಿ ಮುಖಂಡರು ನೂರಾರು ಕೋಟಿಗಳಷ್ಟು ದೊಡ್ಡ ವರ್ಗಾವಣೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಬಿಡಿಎ ಆಯುಕ್ತರಾಗಿ ಪೋಸ್ಟಿಂಗ್ ಮಾಡಲು 20 ಕೋಟಿ, ಪೋಲಿಸ್ ಇನ್ಸ್ಪೆಕ್ಟರ್ ವರ್ಗಾವಣೆಗೆ 50 ಲಕ್ಷ ಲಂಚ ಪಡೆಯಲಾಗುತ್ತಿದೆ. ಎಲ್ಲರೂ ಸೇರಿ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ರಾಜ್ಯ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯ ಷಡಕ್ಷರಿಯ ಆಸ್ತಿಗಳ ಮೇಲೆ ದಾಳಿ ಮಾಡಿ ಅಕ್ರಮವಾಗಿ ಗಳಿಸಿದ ಸಂಪತ್ತನ್ನು ಹೊರತೆಗೆಯಬೇಕು ಎಂದು ಅವರು ಆಗ್ರಹಿಸಿದರು.
ಕಂದಾಯ ಸಚಿವ ಆರ್ ಅಶೋಕ ಕೋವಿಡ್ ನಿಂದ ಮೃತರಾದವರ ಚಿತಾಭಸ್ಮ ವಿಸರ್ಜಿಸಿ ಅಂತಿಮ ವಿಧಿ ವಿಧಾನ ಕೈಗೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು, ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ತಮ್ಮ, ತಪ್ಪಿಗಾಗಿ ಪಿಂಡ ಪ್ರಧಾನ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ