ಕುಂದಾಪುರ: ಹತ್ತು ವರ್ಷ ಪ್ರೀತಿಸಿ ಮದುವೆಯಾದ ಪತಿಯನ್ನೇ ಕೊಂದ ಕಿರಾತಕಿ!
ಕುಂದಾಪುರ 22(ಉಡುಪಿ ಟೈಮ್ಸ್ ವರದಿ): ತಾಲೂಕಿನ ಅಂಪಾರಿನಲ್ಲಿ ಅ.18 ರಂದು ನಡೆದಿದ್ದ ನಾಗರಾಜ ಅವರ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಶಂಕೆ ವ್ಯಕ್ತಪಡಿಸಿ ಮೃತರ ಸಹೋದರಿ ನೀಡಿ ದೂರಿನಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತರ ಪತ್ನಿ ಮಮತಾ (34) ಹಾಗೂ ಆಕೆಯ ಪರಿಚಿತರಾಗಿರುವ ಕುಮಾರ್ ಹಾಗೂ ದಿನಕರನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಇಬ್ಬರು ಅಪ್ರಾಪ್ತರನ್ನು ರೀಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ.
ನಾಗರಾಜ್ ಅವರು ವಿಪರೀತ ಕುಡಿತದ ಚಟ ಹೊಂದಿದ್ದು,ಜೀವನ ದಲ್ಲಿ ಜಿಗುಪ್ಸೆಗೊಂಡು ಅ.18 ರಂದು ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪತ್ನಿ ಮಮತಾ ಪೊಲೀಸರಿಗೆ ದೂರು ನೀಡಿದ್ದರು. ಈ ನಡುವೆ ನಾಗರಾಜ ಅವರ ಸಾವಿನ ಸುದ್ದಿ ತಿಳಿದು ಅವರ ಸಹೋದರಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸುಳಗೋಡು ಮಾಲ್ವೆ ಗ್ರಾಮದ ನಿವಾಸಿ ನಾಗರತ್ನ ಹಾಗೂ ಸಂಬಂಧಿಕರು ಶವಗಾರದಲ್ಲಿರುವ ಮೃತದೇಹವನ್ನು ಪರೀಕ್ಷಿಸಿದಾಗ ಮೃತದೇಹದ ಮೈ ಮೇಲೆ ಹಾಗೂ ಕುತ್ತಿಗೆ ಭಾಗದಲ್ಲಿ ಗಾಯಗಳಿದ್ದೂದು ಕಂಡುಬಂದಿದೆ. ಅಲ್ಲದೇ ನಾಗರಾಜ ಅವರು ಕೆಲ ದಿನಗಳ ಹಿಂದೆ ಸಹೋದರಿಗೆ ಕರೆ ಮಾಡಿ ಪತ್ನಿ ಮತ್ತು ಕೆಲವರು ಸೇರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದರು. ಹೀಗಾಗಿ ಇದೊಂದು ವ್ಯವಸ್ಥಿತವಾದ ಕೊಲೆ ಎಂದು ಸಂಶಯ ವ್ಯಕ್ತಪಡಿಸಿದ ನಾಗರತ್ನ ಅವರು ಪೊಲೀಸರಿಗೆ ದೂರು ನೀಡಿದ್ದರು.
ಇದೀಗ ಸಹೋದರಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಶಂಕರನಾರಾಯಣ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.