ಉಡುಪಿ: ಆನ್ಲೈನ್’ನಲ್ಲಿ ಪಾರ್ಟ್ ಟೈಮ್ ಕೆಲಸದ ಆಮಿಷ – ಲಕ್ಷ ರೂ. ವಂಚನೆ
ಉಡುಪಿ ಅ.21(ಉಡುಪಿ ಟೈಮ್ಸ್ ವರದಿ): ಆನ್ಲೈನ್ ನಲ್ಲಿ ಪಾರ್ಟ್ ಟೈಮ್ ಕೆಲಸ ಕೊಡಿಸುವುದಾಗಿ ನಂಬಿಸಿ ಒಂದು ಲಕ್ಷ ರೂ. ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಈ ಬಗ್ಗೆ ವಂಚನೆಗೆ ಒಳಗಾದ ಕೆ.ಅರ್ಚನಾ ನಾಯಕ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಅ.19 ರಂದು ಕೆ. ಅರ್ಚನಾ ನಾಯಕ್ ಅವರ ಮೊಬೈಲ್ ಗೆ ಪಾರ್ಟ್ ಟೈಮ್ ಜಾಬ್ ಬಗ್ಗೆ ಸಂದೇಶ ಬಂದಿತ್ತು. ಅದರಲ್ಲಿದ್ದ ವಾಟ್ಸ್ ಅಪ್ ಸಂಖ್ಯೆ ಗೆ ಸಂಪರ್ಕಿಸಿದಾಗ ಆ ಕಡೆಯಿಂದ ರಿಜಿಸ್ಟರ್ ಲಿಂಕ್ ಒಂದನ್ನು ಕಳುಹಿಸಿದ್ದು, ಅದರಲ್ಲಿ ದೂರುದಾರರು ತನ್ನ ಬಯೋಡಾಟಾವನ್ನು ಭರ್ತಿ ಮಾಡಿ ರಿಜಿಸ್ಟರ್ ಮಾಡಿಕೊಂಡಿದ್ದರು.
ಅದು Indian F-Kmall ಕಂಪೆನಿಯಾಗಿದ್ದು, ಈ ಕಂಪೆನಿಯಲ್ಲಿ ಒಂದು ಸ್ವತ್ತು ಖರೀದಿ ಮಾಡಿ, ಅದನ್ನು ಆನ್ ಲೈನ್ ಮುಖೇನ ಮಾರಾಟ ಮಾಡಿದ್ದಲ್ಲಿ ಅಸಲು ಮೊತ್ತ ಹಾಗೂ ಅದಕ್ಕೆ ಕಮಿಶನ್ ಪಡೆಯುವುದು ಟಾಸ್ಕ್ ಆಗಿರುತ್ತದೆ. +916398485592 ಮೊಬೈಲ್ ಸಂಖ್ಯೆಯಿಂದ ಅಪರಿಚಿತ ವ್ಯಕ್ತಿ ತಾನು Indian F-Kmall ಕಂಪೆನಿಯವರೆಂದು ಹೇಳಿ ಟೆಲಿಗ್ರಾಮ್ ಆಪ್ ಮುಖೇನ ಕಂಪೆನಿಯ ವೆಬ್ ಸೈಟ್ ನಲ್ಲಿ ಟಾಸ್ಕ್ ಕಳುಹಿಸಿರುವುದಾಗಿ ಸಂದೇಶ ಕಳುಹಿಸುತ್ತಿದ್ದ. ದೂರುದಾರರು ಕಂಪೆನಿಯಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದ ಯೂಸರ್ ಐ.ಡಿ.ಯನ್ನು ಬಳಸಿ, ಒಟ್ಟು 1,06,900 ರೂ. ಮೌಲ್ಯದ ಸ್ವತ್ತುಗಳನ್ನು ಆನ್ ಲೈನ್ ಮುಖೇನ ಖರೀದಿಸಿ ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿದ್ದರು. ಆದರೆ, ದೂರುದಾರರು ನೀಡಿದ ಹಣ ಹಾಗೂ ಲಾಭಾಂಶವನ್ನು ಕಂಪೆನಿಯವರು ಈ ವರೆಗೂ ನೀಡಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.