‘ಸ್ವಚ್ಛ ಶಿರ್ವ ನಮ್ಮ ಶಿರ್ವ’ ಕಾರ್ಯಕ್ರಮವನ್ನು ಅಣಕಿಸುವಂತಿದೆ ರಸ್ತೆ ಬದಿಯ ತ್ಯಾಜ್ಯ!
ಶಿರ್ವ, ಅ.21(ಉಡುಪಿ ಟೈಮ್ಸ್ ವರದಿ): ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ “ಸ್ವಚ್ಛ ಶಿರ್ವ ನಮ್ಮ ಶಿರ್ವ” ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ. ಈ ಕಾರ್ಯಕ್ರಮದ ಮೂಲಕ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ.
ಆದರೂ ಶಿರ್ವ ಗ್ರಾಮ ಪಂಚಾಯತ್ನಲ್ಲಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವ ಪ್ರವೃತ್ತಿ ಮಾತ್ರ ಕಡಿಮೆಯಾಗಿಲ್ಲ. ಕಾಪು-ಶಿರ್ವ ರಸ್ತೆಯ ಶಾಂತಿಗುಡ್ಡೆ ಎಂಬಲ್ಲಿ ಸಾರ್ವಜನಿಕರು ಘನ ಮತ್ತು ದ್ರವ ತ್ಯಾಜ್ಯಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಮನ ಬಂದಂತೆ ರಸ್ತೆ ಬದಿಗೆ ಎಸೆಯುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ.
ರಸ್ತೆ ಬದಿಯಲ್ಲಿ ಎಸೆದ ಕಸಗಳು ಎಲ್ಲೆಂದರಲ್ಲಿ ಹರಡಿಕೊಂಡು ಪರಿಸರವನ್ನು ಹಾಳುಮಾಡುತ್ತಿದ್ದು, ಇದರಿಂದ ದನಕರುಗಳಿಗೆ ಮತ್ತು ಜನರಿಗೆ ಸಮಸ್ಯೆಯಾಗುತ್ತಿದ್ದು, ತ್ಯಾಜ್ಯಗಳ ರಾಶಿಯಿಂದ ಸಾಂಕ್ರಾಮಿಕ ಕಾಯಿಲೆಗಳ ಹಾವಳಿಯ ಭೀತಿ ಕೂಡಾ ಎದುರಾಗಿದೆ. ಈ ಪರಿಸರದಲ್ಲಿ ತ್ಯಾಜ್ಯಗಳ ರಾಶಿಯಿಂದ ದುರ್ವಾಸನೆ ಬರುತ್ತಿದ್ದು ದಿನನಿತ್ಯ ಒಡಾಡುವ ನಾಗರಿಕರು ಮೂಗು ಮುಚ್ಚಿಕೊಂಡೇ ನಡೆದಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್, ಉಪನ್ಯಾಸಕರು, ಸಂತ ಮೇರಿ ಕಾಲೇಜು, ಶಿರ್ವ