ಕೋವಿಡ್ ನಿಂದ ಆರ್ಥಿಕ ಸಂಕಷ್ಟ: ಹೋಟೆಲ್ ಮಾಲಕ ಚಲಿಸುತ್ತಿದ್ದ ರೈಲಿನ ಎದುರು ಜಿಗಿದು ಆತ್ಮಹತ್ಯೆ
ಕೊಟ್ಟಾಯಂ ಅ.20 : ಕೋವಿಡ್ ನಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಬೇಸತ್ತು ಕುರಿಚಿಯ ರೆಸ್ಟೋರೆಂಟ್ ಮಾಲಕರೊಬ್ಬರು ಚಲಿಸುತ್ತಿದ್ದ ರೈಲಿನ ಎದುರು ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದಲ್ಲಿ ನಡೆದಿದೆ.
ಕೊಟ್ಟಾಯಂಗೆ ಸಮೀಪದ ಕನಕಕ್ಕುನ್ನು ಗುರುದೇವ ಭವನದ ನಿವಾಸಿ ಸರಿನ್ ಮೋಹನ್ (42) ಆತ್ಮಹತ್ಯೆ ಮಾಡಿಕೊಂಡವರು.
ಸರಿನ್ ಮೋಹನ್ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೊದಲು ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಡೆತ್ ನೋಟ್ ಬರೆದಿದ್ದು, ಅದರಲ್ಲಿ ರಾಜ್ಯ ಸರಕಾರವು “ಅವೈಜ್ಞಾನಿಕ” ಕೋವಿಡ್ -19 ಲಾಕ್ಡೌನ್ ಕ್ರಮಗಳನ್ನು ಹೇರಿದ್ದಕ್ಕಾಗಿ ತನ್ನಂತಹ ಉದ್ಯಮಿಗಳ ಜೀವನವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದೇಶದಲ್ಲಿದ್ದ ಸರಿನ್ ಕೇರಳಕ್ಕೆ ವಾಪಸ್ ಬಂದು ಆರು ತಿಂಗಳ ಹಿಂದೆ ಕುರಿಚಿಯಲ್ಲಿ ರೆಸ್ಟೋರೆಂಟ್ ಆರಂಭಿಸಿದರು. ವ್ಯಾಪಾರವು ಚೆನ್ನಾಗಿ ಸಾಗುವ ಲಕ್ಷಣಗಳು ಗೋಚರಿಸಿದಾಗ ಅದೇ ಕಟ್ಟಡದಲ್ಲಿ ಜವಳಿ ಅಂಗಡಿ ಮತ್ತು ಬಿಡಿಭಾಗಗಳ ಘಟಕವನ್ನು ಆರಂಭಿಸಲು ವ್ಯವಸ್ಥೆ ಮಾಡಿದರು. ಆದಾಗ್ಯೂ, ಕೋವಿಡ್ -19 ರ ಎರಡನೇ ಅಲೆಯ ಸಮಯದಲ್ಲಿ ವಿಧಿಸಲಾದ ಲಾಕ್ಡೌನ್ ಅವರ ಆದಾಯದ ಮೇಲೆ ಪರಿಣಾಮ ಬೀರಿತು. ಅವರು ಕಟ್ಟಡಕ್ಕೆ ತಿಂಗಳಿಗೆ 35,000 ರೂ. ಬಾಡಿಗೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ.