ನಳಿನ್ ಒಬ್ಬ ಅಯೋಗ್ಯ, ಅವಿವೇಕಿ, ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ: ಕಾಂಗ್ರೆಸ್ ವಕ್ತಾರ ಲಕ್ಷ್ಮಣ್
ಮೈಸೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಡ್ರಗ್ ಪೆಡ್ಲರ್ ಎಂದು ಹೇಳಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಕಾಂಗ್ರೆಸ್ ನಾಯಕರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಮೈಸೂರಿನಲ್ಲಿಂದು ಮಾಧ್ಯಮ ಜೊತೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ನಳಿನ್ ಕುಮಾರ್ ಕಟೀಲ್ ಒಬ್ಬಅಯೋಗ್ಯ, ಅವಿವೇಕಿ, ಸಂಸ್ಕೃತಿ ಹೀನ ವ್ಯಕ್ತಿ. ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟಕೊಂಡಿದ್ದ ಎಂದು ಏಕವಚನದಲ್ಲಿಯೇ ಟೀಕಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಇತಿಹಾಸವನ್ನು ತೆಗೆದುಕೊಂಡರೆ, ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಮದುವೆಯಾಗುವುದಾಗಿ ನಂಬಿಸಿ ಆಕೆಯ ಪತಿಗೆ ಬೆದರಿಕೆ ಹಾಕಿದ ವಿಚಾರದಲ್ಲಿ ಮಹಿಳೆ 2014ರಲ್ಲಿ ಪ್ರತಿಷ್ಠಿತ ಟಿವಿ ಚಾನೆಲ್ ವೊಂದರಲ್ಲಿ ಚರ್ಚೆಯಲ್ಲಿ ಭಾಗವಹಿಸಿ ಆರೋಪಿಸಿದ್ದರು. ಇದು ನಳಿನ್ ಕುಮಾರ್ ಕಟೀಲ್ ಹಿನ್ನೆಲೆ. ಈ ಬಗ್ಗೆ ಸಾರ್ವಜನಿಕ ವಾಗಿಯೇ ಸಾಕ್ಷಿಗಳು ಸಿಗುತ್ತದೆ ಎಂದು ಆರೋಪಿಸಿದರು.
ಮತ್ತೊಂದು ಪ್ರಕರಣದಲ್ಲಿ ಮಂಗಳೂರಿನಲ್ಲಿ ವಿನಾಯಕ್ ಬಳಿಗಾರ್ ಹತ್ಯೆಯ ಪ್ರಮುಖ ಆರೋಪಿ ನರೇಶ್ ಶೆಣೈಅವರ ಖಾಸಾ ದೋಸ್ತಿ ನಳಿನ್ ಕುಮಾರ್ ಕಟೀಲು. ಇಂತಹ ವ್ಯಕ್ತಿಯಿಂದ ಸಂಸ್ಕೃತಿ, ಸಭ್ಯತೆಯನ್ನು ನಿರೀಕ್ಷಿಸುವುದು ಹೇಗೆ ಸಾಧ್ಯ ಎಂದು ಲಕ್ಷ್ಮಣ್ ಕೇಳಿದ್ದಾರೆ.
ನಳಿನ್ ಕುಮಾರ್ ಕಟೀಲ್ ನಾಲಿಗೆಯನ್ನು ಬಿಗಿಹಿಡಿದು ಮಾತನಾಡಬೇಕು. ಕಾಂಗ್ರೆಸ್ ಪಕ್ಷದ ವೈಫಲ್ಯ, ಸಮಸ್ಯೆಗಳನ್ನು ಪ್ರಸ್ತಾಪಿಸಲಿ, ಚರ್ಚೆಗೆ ಆಹ್ವಾನಿಸಲಿ, ಅವರ ಸಾಧನೆಗಳಿದ್ದರೆ ಹೇಳಿಕೊಳ್ಳಲಿ. ಅದು ಬಿಟ್ಟು ಕಾಲ್ಪನಿಕ ವರದಿಗಳ ಆಧಾರದ ಮೇಲೆ ನಮ್ಮ ನಾಯಕ ರಾಹುಲ್ ಗಾಂಧಿಯವರ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ, ಇದೇ ರೀತಿ ಮುಂದುವರಿದರೆ ಕಟೀಲು ಅವರ ಕಚೇರಿ, ಮನೆ ಮುಂದೆ ಧರಣಿ, ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾದಕ ವಸ್ತುಗಳ ಸೇವನೆ, ಬಳಕೆ, ಸಂಗ್ರಹ ಬಗ್ಗೆ ತನಿಖೆ ನಡೆಸಲು ಎನ್ ಸಿಬಿ ಇದೆ, ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿದೆ, ರಾಹುಲ್ ಗಾಂಧಿಯವರು ಡ್ರಗ್ ಪೆಡ್ಲರ್ ಆದರೆ ತನಿಖೆ ಮಾಡಿಸಬಹುದಲ್ಲವೇ ಎಂದು ಕೂಡ ಲಕ್ಷ್ಮಣ್ ನಳಿನ್ ಕುಮಾರ್ ಕಟೀಲರಿಗೆ ಸವಾಲು ಎಸೆದಿದ್ದಾರೆ.