ಕಾಂಗ್ರೆಸ್ ಭಾಗ್ಯಗಳು ಅವರಿಗೆ ಮತಗಳನ್ನು ನೀಡುವುದಿಲ್ಲ: ಸಿಎಂ ಬೊಮ್ಮಾಯಿ

ಬಾಗಲಕೋಟೆ: ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಸರ್ಕಾರ ಇದ್ದಾಗ ಹಲವು ಭಾಗ್ಯಗಳನ್ನು ನೀಡಿದೆ ಎಂದು ಹೇಳುತ್ತಲೇ ಇರುತ್ತಾರೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಕೊಟ್ಟಂತಹ ಭಾಗ್ಯ ಯಾರ ಮನೆ ಬಾಗಿಲಿಗೂ ತಲುಪಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಕರ್ನಾಟಕದ ಪಾಲಿಗೆ ದೌರ್ಭಾಗ್ಯವಾಯಿತು. ಅದಕ್ಕಾಗಿಯೇ ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ಕಳೆದ ಚುನಾವಣೆಯಲ್ಲಿ ತಿರಸ್ಕರಿಸಿ, ವಿರೋಧ ಪಕ್ಷದಲ್ಲಿ ಕೂರುವಂತೆ ಮಾಡಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಲೇವಡಿ ಮಾಡಿದ್ದಾರೆ. 

ಸಿಂದಗಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಅಲಮೇಲ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಿದ್ದ ಬೊಮ್ಮಾಯಿಯವರು, ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಜನರು ಬರಿ ಭಾಗ್ಯಗಳಿಗೆ ಮರುಳಾಗುತ್ತಾರೆಂಬ ಭ್ರಮೆಯಲ್ಲಿದ್ದ ಸಿದ್ದರಾಮಯ್ಯ ಮತ್ತೆ ತಮ್ಮದೇ ಸರ್ಕಾರ ಬರುತ್ತದೆ ಎಂದು ತಿಳಿದುಕೊಂಡಿದ್ದರು. ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದಿದ್ದೇ ನಮ್ಮ ದೌರ್ಭಾಗ್ಯ. ಆದರೆ, ರಾಜ್ಯದ ಜನರು ಮೂರ್ಖರಲ್ಲ. ಹೀಗಾಗಿ, 2018ರಲ್ಲಿ ಕಾಂಗ್ರೆಸ್’ಗೆ ಬಹುಮತ ನೀಡಲಿಲ್ಲ. ಅವರ ಭಾಗ್ಯಗಳು ಯಾರ ಮನೆಗೂ ತಲುಪಿಲ್ಲ. ಹೀಗಾಗಿ ಜನ ಅವರನ್ನು ಬಹಿಷ್ಕಾರ ಮಾಡಿದರು ಎಂದರು. 

ಕಾಂಗ್ರೆಸ್ ನವರು ಏನು ತ್ಯಾಗ ಮಾಡಿದ್ದಾರೆ ಎನ್ನುವುದನ್ನು ಹೇಳಲಿ. ಸುಭಾಷ್ ಚಂದ್ರ ಬೋಸ್, ಲೋಕಮಾನ್ಯ ತಿಲಕ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಸೇರಿ ಲಕ್ಷಾಂತರ ಜನರು ದೇಶಕ್ಕಾಗಿ ಪ್ರಾಣಕೊಟ್ಟಿದ್ದಾರೆ. ಇವರೆಲ್ಲ ಏನು ಕಾಂಗ್ರೆಸ್ ನವರಾ? ಆದರೆ, ಕಾಂಗ್ರೆಸ್ ನವರು ಕೇವಲ ನೆಹರು ಮನೆತನದ ತ್ಯಾಗದ ಬಗ್ಗೆ ಮಾತ್ರ ಏಕೆ ಹೇಳುತ್ತಾರೆ? ಸ್ವಾತಂತ್ರ್ಯ ಬಂದಿದ್ದು, ವೀರರಿಂದ ವಿನಃ ಹೇಳಿಗಳಿಂದಲ್ಲ. ಪ್ರತಿಯೊಬ್ಬ ದೇಶಾಭಿಮಾನಿಯೂ ಆರ್’ಎಸ್ಎಸ್’ಗೆ ಸೇರಿದವರು ಎಂಬುದನ್ನು ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರು ಅರಿತುಕೊಳ್ಳಬೇಕು ಎಂದು ಹೇಳಿದರು. 

ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಕಾಂಗ್ರೆಸ್ ಅಲ್ಪಸಂಖ್ಯಾತರ ಪಕ್ಷವೆಂದು ಹೇಳಿದರು. 

ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಅದು ಮುಸ್ಲಿಮರಿಗೆ ಅನುಕೂಲವಾಯಿತು. ಸಿದ್ದರಾಮಯ್ಯ ಅವರು ತಮ್ಮ ಆಡಳಿತದಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ, ಆದರೆ ಬಹುಪಾಲು ಕಾರ್ಯಕ್ರಮಗಳು ಕೇವಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಪ್ರಯೋಜನವನ್ನು ನೀಡಿವೆ. ಇದೀಗ ಅವರು, ಹಿಂದುಳಿದ ವರ್ಗಗಳ ಮತಗಳನ್ನು ಕೇಳುತ್ತಿಲ್ಲ, ಕೇವಲ ಅಲ್ಪಸಂಖ್ಯಾತರ ಬೆಂಬಲವನ್ನು ಬಯಸುತ್ತಿದ್ದಾರೆ. ಆದರೆ ಸಿಎಂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ಧಿಗೆ ಎಲ್ಲಾ ಸಮುದಾಯಗಳ ಬೆಂಬಲವನ್ನು ಬಯಸುತ್ತಿದೆ. 2023 ರ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಒಡೆದು ಹೋಗಲಿದೆ. ಒಂದು ಭಾಗ ಸಿದ್ದರಾಮಯ್ಯನವರಲ್ಲಿ ಹಾಗೂ ಮತ್ತೊಂದು ಭಾಗ ಡಿ.ಕೆ.ಶಿವಕುಮಾರ್ ಬಳಿ ಇರಲಿದೆ ಎಂದು ಹೇಳಿದ್ದಾರೆ. 

ಅದೇ ಪಕ್ಷವು ವೀರಶೈವ-ಲಿಂಗಾಯತ ಸಮುದಾಯವನ್ನು ವಿಭಜಿಸಲು ಪ್ರಯತ್ನಿಸಿತು, ಟಿಪ್ಪು ಸುಲ್ತಾನನ ಜನ್ಮದಿನದ ಸ್ಮರಣೆಯ ಮೂಲಕ ಹಿಂದೂ ಮತ್ತು ಮುಸ್ಲಿಮರ ಸಾಮರಸ್ಯವನ್ನು ಮುರಿಯಿತು ಮತ್ತು 24 ಹಿಂದೂ ಕಾರ್ಯಕರ್ತರ ಹತ್ಯೆಯ ಹಿಂದಿನ ಕಾರಣವನ್ನೂ ನಾವು ಮರೆಯಬಾರದು. ನೀವು ಈ ರಾಷ್ಟ್ರದ ರಕ್ಷಕರು ಅಥವಾ ಇತರ ದುಷ್ಟ ಶಕ್ತಿಗಳಿಗೆ ಮತಹಾಕುತ್ತೀರಾ? ಕಟೀಲ್ ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!