ಪಡುಬಿದ್ರೆ: ಪಂಚಾಯತ್ ಸದಸ್ಯನ ಜಾಗಕ್ಕೆ ಕಸ ಸುರಿದ ವ್ಯಕ್ತಿಗೆ ಬಿತ್ತು 5000 ರೂ. ದಂಡ!
ಪಡುಬಿದ್ರೆ ಅ.19: ಖಾಸಗಿ ಜಾಗದಲ್ಲಿ ಕಂಪೆನಿಯೊಂದರ ಕಸವನ್ನು ಸುರಿದ ವ್ಯಕ್ತಿಗೆ 5000 ರೂ. ದಂಡ ಪಾವತಿಸುವಂತೆ ಎಲ್ಲೂರು ಗ್ರಾಮ ಪಂಚಾಯತ್ ಆದೇಶ ನೀಡಿದೆ.
ಎಲ್ಲೂರು ಪಂಚಾಯತ್ ಸದಸ್ಯರಾದ ರವಿರಾಜ್ ಅವರ ಪಟ್ಟಾ ಜಾಗಕ್ಕೆ 2 ಲೋಡ್ ಕಸವನ್ನು ಸುರಿಯಲಾಗಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಇದನ್ನು ಬೆಳಪುವಿನ ರಝಾಕ್ ಸುರಿದಿರುವುದು ಬೆಳಕಿಗೆ ಬಂತು.
ಇನ್ನಾ ಗ್ರಾಮ ಪಂ. ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಕಂಪೆನಿಯ ಘನ ತ್ಯಾಜ್ಯವನ್ನು ತೆರವುಗೊಳಿಸಲು ಬೆಳಪುವಿನ ರಝಾಕ್ ಅವರಿಗೆ ಗುತ್ತಿಗೆ ನೀಡಿದೆ. ಗುತ್ತಿಗೆ ಪಡೆದ ರಝಾಕ್ ಆ ಕಸವನ್ನು ಖಾಲಿ ಜಾಗದಲ್ಲಿ ಸುರಿದು ಹೋಗಿದ್ದರು. ಎಲ್ಲೂರು ಪಂಚಾಯತ್ ಅಧ್ಯಕ್ಷ ಜಯಂತ್ ಕುಮಾರ್ ಕಸವನ್ನು ನೀಡಿದ ಕಂಪನಿಯ ಅಧಿಕಾರಿಗಳನ್ನು ಮತ್ತು ಕಸ ಸುರಿದ ರಝಾಕ್ ಅವರನ್ನು ಸ್ಥಳಕ್ಕೆ ಕರೆಸಿದ್ದರು. ಈ ವೇಳೆ ಖಾಸಗಿ ಜಾಗದಲ್ಲಿ ಕಸ ಸುರಿದಿದ್ದಕ್ಕಾಗಿ 5000 ರೂ. ದಂಡ ವಿಧಿಸಿದರು. ಹಾಗೂ ಈ ಕಸವನ್ನು ಗುರುವಾರದೊಳಗೆ ತೆರವುಗೊಳಿಸದಿದ್ದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.