ಶ್ರೀವಿಶ್ವೇಶತೀರ್ಥರ ಜನ್ಮವರ್ಧಂತಿ-ವಿದ್ಯಾರ್ಥಿನಿ ನಿಲಯ ನಿರ್ಮಾಣಕ್ಕೆ 4.50 ಕೋಟಿ ರೂ. ಅನುದಾನ ಮಂಜೂರು

ಪೇಜಾವರ ಮಠಾಧೀಶರಾಗಿ ತಮ್ಮ ತಪಸ್ಸು, ಹಾಗೂ ಬಹುಮುಖಿ ರಾಷ್ಟ್ರಕಾರ್ಯಗಳಿಂದ ಪ್ರಸಿದ್ಧಿ ಪಡೆದಿದ್ದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ 90 ನೇ ಜನ್ಮವರ್ಧಂತಿ ಸ್ಮರಣಾರ್ಥ ಉಡುಪಿಯಲ್ಲಿ ನಿರ್ಮಾಣವಾಗುವ ಹಿಂದುಳಿದ ವರ್ಗಗಳ ಉಚಿತ ವಿದ್ಯಾರ್ಥಿನಿ ನಿಲಯಕ್ಕೆ ರಾಜ್ಯ ಸರ್ಕಾರ 4.50 ಕೋಟಿ ರೂ ಅನುದಾನ ಮಂಜೂರು ಮಾಡಿದೆ. ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ವಿಶೇಷ ಮುತುವರ್ಜಿಯಿಂದ ಈ ಅನುದಾನ ಮಂಜೂರಾಗಿದೆ.

ಈಗಾಗಲೇ ಶ್ರೀ ವಿಶ್ವೇಶತೀರ್ಥರು ಉಡುಪಿ ಕುಕ್ಕಿಕಟ್ಟೆ ಸಮೀಪ ಶ್ರೀಮಠದ ಭೂಮಿಯಲ್ಲಿ ಒಂದು ಉಚಿತ ವಿದ್ಯಾರ್ಥಿನಿ ನಿಲಯವನ್ನ ತಮ್ಮ ನಾಲ್ಕನೇ ಪರ್ಯಾಯದ ಅವಧಿಯಲ್ಲಿ 2000 ನೇ ಇಸವಿಯಲ್ಲಿಸ್ಥಾಪಿಸಿದ್ದು ಅದನ್ನು ಅಂದಿನ‌ ಉಪಪ್ರಧಾನಿ ಲಾಲಕೃಷ್ಣ ಅಡ್ವಾಣಿಯವರು ಉದ್ಘಾಟಿಸಿದ್ದರು. ಅದು ಈಗ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ .
ಈ ವಿದ್ಯಾರ್ಥಿನಿ ನಿಲಯಕ್ಕೆ ಬೇಡಿಕೆ ಹೆಚ್ಚಿತ್ತು ಅದೇ ವೇಳೆ ಶ್ರೀಗಳವರ 90 ನೇ ಜನ್ಮವರ್ಧಂತಿಗೆ ಸಮಾಜಕ್ಕೆ ಉಪಯೋಗ ವಾಗುವ ಒಂದು ಯೋಜನೆ ಅನುಷ್ಠಾನಗೊಳಿಸಬೇಕೆಂದು ಶ್ರೀಪಾದರ ವಿಶೇಷ ಭಕ್ತರೂ ಅಭಿಮಾನಿಗಳೂ ಆಗಿದ್ದ ಉದ್ಯಮಿಗಳಾದ ಡಾ.ಜಿ ಶಂಕರ್ ಮತ್ತು ಭುವನೇಂದ್ರ ಕಿದಿಯೂರು ಮೊದಲಾದವರು 2019 ರಲ್ಲಿ ಶ್ರೀಗಳು ಕಾಲವಾಗುವ ಮೊದಲೇ ಸಂಕಲ್ಪಿಸಿದ್ದರು. ಅದರಂತೆ ಈ ವಿದ್ಯಾರ್ಥಿನಿ ನಿಲಯಕ್ಕೆ ಹೆಚ್ಚುವರಿಯಾಗಿ ಒಂದು ವಿದ್ಯಾರ್ಥಿನಿ ನಿಲಯವನ್ನು ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ಆ ವೇಳೆಗಾಗಲೇ ಶ್ರೀಪಾದರು ಹರಿಪಾದ ಸೇರಿದ್ದರು. 

ಈ ಯೋಜನೆಯ ಬಗ್ಗೆ ಆರ್ಥಿಕ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.‌ ಇದೀಗ ಕೋಟ ಶ್ರೀನಿವಾಸ ಪೂಜಾರಿಯವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಲ್ಲಿ ವಿಷಯ ಮಂಡಿಸಿ ತಮ್ಮ ಇಲಾಖೆಯ ಮೂಲಕ ಅನುದಾನ ಮಂಜೂರು ಮಾಡಿದ್ದಾರೆ. ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಡಾ.ಜಿ ಶಂಕರ್, ಭುವನೇಂದ್ರ ಕಿದಿಯೂರು ಮೊದಲಾದವರು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರಕ್ಕೆ, ಮುಖ್ಯಮಂತ್ರಿಯವರಿಗೆ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್ಟರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕುಕ್ಕಿಕಟ್ಟೆಯ ಹಾಸ್ಟೆಲ್ ಬಳಿಯೇ 150 ವಿದ್ಯಾರ್ಥಿನಿಯರು ಉಳಿದು ಕೊಳ್ಳುವ ಸಾಮರ್ಥ್ಯದ ಈ ನೂತನ ವಿದ್ಯಾರ್ಥಿನಿ ನಿಲಯವನ್ನೂ ನಿರ್ಮಿಸಲು ಶ್ರೀಗಳು ಉದ್ದೇಶಿಸಿದ್ದು ಸದ್ಯದಲ್ಲೇ ನಿರ್ಮಾಣ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪೇಜಾವರ ಮಠದ ಪ್ರಕಟಣೆ ತಿಳಿಸಿದೆ .

Leave a Reply

Your email address will not be published. Required fields are marked *

error: Content is protected !!