| ಉಡುಪಿ: ಆಡಳಿತಾರೂಢ ಬಿಜೆಪಿ ಸರಕಾರ ಮಂಡಿಸಲು ನಿರ್ಧರಿಸುವ ಮತಾಂತರ ವಿರೋಧಿ ಮಸೂದೆ ಮತ್ತು ರಾಜ್ಯದಲ್ಲಿನ ಮಿಷನರಿಗಳ ಸಮೀಕ್ಷೆಯನ್ನು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿಯೋನ್ ಡಿʼಸೋಜ ತೀವ್ರವಾಗಿ ಖಂಡಿಸಿದ್ದಾರೆ.
ರಾಜ್ಯದ ಬಿಜೆಪಿ ಸರಕಾರ ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ತಮ್ಮನ್ನು ತಾವು ಶ್ರೇಷ್ಠ ಎಂದು ಹೇಳಿಕೊಂಡು ಕ್ರೈಸ್ತರು ಬಲವಂತವಾಗಿ ಮತಾಂತರ ಮಾಡುತ್ತಾರೆ ಎಂದು ಸುಳ್ಳು ಮಾಹಿತಿ ನೀಡುವುದರ ಮೂಲಕ ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಹಾಳುಮಾಡುವ ಕೆಲಸ ನಡೆಸುತ್ತಿದ್ದಾರೆ.
ಬಿಜೆಪಿ ಸರಕಾರ ತರಲು ಉದ್ದೇಶಿಸಿರುವ ಮತಾಂತರ ವಿರೋಧಿ ಕಾನೂನು ರಾಜಕೀಯ ಉದ್ದೇಶಗಳನ್ನು ಹೊಂದಿದ್ದು ಇದರಿಂದ ಸಮಾಜದಲ್ಲಿ ಸಾಮರಸ್ಯವನ್ನು ಕೆಡಿಸುವ ಹುನ್ನಾರವಾಗಿದೆ. ವಾಸ್ತವವಾಗಿ ಇಡೀ ಕ್ರೈಸ್ತ ಸಮುದಾಯ ಬಲವಂತದ ಧಾರ್ಮಿಕ ಮತಾಂತರದ ವಿರುದ್ದವಿದ್ದು ಆದರೆ, ಕೆಲವರು ಮಾಡಿದ ತಪ್ಪುಗಳಿಗಾಗಿ ಕ್ರಿಶ್ಚಿಯನ್ ಧರ್ಮ ಮತ್ತು ಇಡೀ ಕ್ರಿಶ್ಚಿಯನ್ ಸಮುದಾಯದ ಹೆಸರನ್ನು ಹಾಳು ಮಾಡುವುದು ಅತ್ಯಂತ ಖಂಡನೀಯ.
ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಎಲ್ಲಿಯೂ ಕೂಡ ಮತಾಂತರ ನಡೆದಿಲ್ಲ ಬದಲಾಗಿ, ಕ್ರಿಶ್ಚಿಯನ್ ಸಮುದಾಯವು ಯಾವಾಗಲೂ ಯುವಜನರು ಮತ್ತು ಅದರ ಜನರ ನಡುವೆ ಅಭಿವೃದ್ಧಿ, ಉತ್ತಮ ನೈತಿಕತೆಯ ಬೋಧನೆಗಳು ಮತ್ತು ಜಾತ್ಯತೀತ ಜೀವನವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇತ್ತೀಚೆಗೆ ಆಡಳಿತ ಪಕ್ಷದ ಶಾಸಕರು ಮತ್ತು ಮುಖ್ಯಮಂತ್ರಿಗಳು ಮಾಡಿರುವ ಹೇಳಿಕೆಗಳು ಇಡೀ ಕ್ರೈಸ್ತ ಸಮುದಾಯಕ್ಕೆ ನೋವನ್ನು ಉಂಟು ಮಾಡಿದ್ದು ಇದೊಂದು ರೀತಿಯ ಒಡೆದು ಆಳುವ ರೀತಿಯಾಗಿದೆ.
ರಾಜ್ಯ ಸರಕಾರ ತರಲು ಹೊರಟಿರುವ ಮತಾಂತರ ವಿರೋಧಿ ಮಸೂದೆ ಮತ್ತು ಕರ್ನಾಟಕದ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆಯಿಂದ ಯೋಜಿಸಲಾಗುತ್ತಿರುವ ಸಮೀಕ್ಷೆಯನ್ನು ಒಳಗೊಂಡಂತೆ ಸರ್ಕಾರವು ಕೈಗೊಳ್ಳುತ್ತಿರುವ ವಿವಿಧ ಅನೈತಿಕ ನಡೆಗಳನ್ನು ಖಂಡಿಸುತ್ತಿದ್ದು, ಮುಗ್ಧರನ್ನು ಬೇಟೆಯಾಡಲು ಮತ್ತು ಹಿಂಸಿಸಲು ಕೆಲವರ ಕೈಯಲ್ಲಿ ರೂಪಿಸಲಾದ ಕಾನೂನುಗಳು ಸಾಧನವಾಗಲಾರವು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಡಿಯೋನ್ ಡಿʼಸೋಜಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. | |