ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ

ಉಡುಪಿ ಅ.18 (ಉಡುಪಿ ಟೈಮ್ಸ್ ವರದಿ): ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಉಡುಪಿಯ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಜಿಲ್ಲಾಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಿರುವ ಈ ರಕ್ತದಾನ ಶಿಬಿರವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಉದ್ಘಾಟಿಸಿದರು. 

ಬಳಿಕ ಮಾತನಾಡಿದ ಅವರು ರಕ್ತದಾನದಷ್ಟು ಪುಣ್ಯದ ಕೆಲಸ ಮತ್ತೊಂದಿಲ್ಲ. ದಾನ ಮಾಡುವಾಗ ಯಾವುದೇ ಪ್ರತಿಫಲ ಇಲ್ಲದೆ ಗೌಪ್ಯವಾಗಿ ಮಾಡಬೇಕು. ದಾನ ಮಾಡಿದ್ದನ್ನು ಪ್ರಚಾರ ಮಾಡಿದರೆ ಅದಕ್ಕೆ ಯಾವುದೇ ಅರ್ಥ ಇರುವುದಿಲ್ಲ ಎಂದರು. ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ ಎಂದ ಅವರು ಸರಕಾರಿ ಆಸ್ಪತ್ರೆಗಳಲ್ಲಿ ಬಡವರು ಚಿಕಿತ್ಸೆ ಅರಸಿ ಬರುತ್ತಾರೆ. ರಕ್ತದ ಅಗತ್ಯ ಇರುವ ಬಡವರಿಗೆ ಸರಕಾರಿ ಆಸ್ಪತ್ರೆಯಲ್ಲಿ ಸಹಾಯ ನೀಡಬೇಕು ಎನ್ನುವ ನಿಟ್ಟಿನಲ್ಲಿ ಕೈಗೊಂಡಿರುವ ಇಂದಿನ ರಕ್ತದಾನ ಶಿಬಿರ ಮಹತ್ವವಾದದ್ದು ಎಂದು ತಮ್ಮ ಹುಟ್ಟು ಹಬ್ಬದ ಸಲುವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ ಅವರು, ಯುವ ಜನತೆ ಪೆಟ್ಟು ಗಲಾಟೆಯಂತಹ ಸಂಘರ್ಷಕ್ಕೆ ಇಳಿದು ಅನಾವಶ್ಯಕವಾಗಿ ಮೈಕೈ ಗಾಯ ಮಾಡಿಕೊಂಡು ರಕ್ತವನ್ನು ವ್ಯರ್ಥ ಮಾಡಿಕೊಳ್ಳುವುದಕ್ಕಿಂತ ರಕ್ತದಾನದ ಮೂಲಕ ಇನ್ನೊಬ್ಬರ ಜೀವ ಉಳಿಸುವ ಪುಣ್ಯದ ಕೆಲಸ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಈ ವೇಳೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜನಾರ್ಧನ ತೋನ್ಸೆ ಅವರು ಮಾತನಾಡಿ, ಪ್ರಮೋದ್ ಮಧ್ವರಾಜ್ ಅವರು ಮಾನವೀಯ ಮೌಲ್ಯಗಳ ಆಗರ ಅವರು ಎಲ್ಲರನ್ನೂ ಒಂದಾಗಿಸಿಕೊಂಡು ಹೋಗುವ ವಿಶಾಲ ಮನೋಭಾವ ಹೊಂದಿರುವವರು. ಸಾಮಾಜಿಕ ಮತ್ತು ಆರ್ಥಿಕ ಅನ್ಯಾಯಗಳ ವಿರುದ್ಧ ಹೋರಾಡುವ ಒಬ್ಬ ಸಮರ್ಥ, ಪ್ರಾಮಾಣಿಕ ನಾಯಕನ ಗುಣವುಳ್ಳವರು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಗುಣಗಾನ ಮಾಡಿದರು.
 ಈ ವೇಳೆ ರಾಜ್ಯ ಸಹಕಾರಿ ಮಹಾಮಂಡಲದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಮಾತನಾಡಿ, ಪ್ರಮೋದ್ ಮಧ್ವರಾಜ್ ಅವರು ಜನಪ್ರತಿನಿಧಿಯಾಗಿ ಸಮಾಜದ ಕುಂದು ಕೊರತೆಗಳನ್ನು ಹೋಗಲಾಡಿಸುವ ಮೂಲಕ ಒಂದು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ್ದಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಅವರ ಅಭಿಮಾನಿ ಬಳಗದ ವತಿಯಿಂದ ಪ್ರಮೋದ್ ಮಧ್ವರಾಜ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಉಡುಪಿ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಧುಸೂದನ್ ನಾಯಕ್, ವೈದ್ಯೆ ಡಾ.ವೀಣಾ, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ಬ್ರಹ್ಮಾವರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗಾಯತ್ರಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮಾಜಿ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಸತೀಶ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!