ಏಳು ಕೋಟಿ ರೂ. ಮೌಲ್ಯದ 9,000 ಮೊಬೈಲ್ ಲೂಟಿ!

ಮಥುರಾ: ಬೆಂಗಳೂರಿಗೆ ಹೊರಟಿದ್ದ ಟ್ರಕ್‌ನಿಂದ 7 ಕೋಟಿ ರೂಪಾಯಿ ಮೌಲ್ಯದ ಸುಮಾರು 9,000 ಮೊಬೈಲ್ ಫೋನ್‌ಗಳನ್ನು ಲೂಟಿ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ದುಷ್ಕರ್ಮಿಗಳು ಚಾಲಕನನ್ನು ಥಳಿಸಿ ವಾಹನದಿಂದ ಹೊರಕ್ಕೆ ಎಸೆದಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

‘ಒಪ್ಪೋ ಮೊಬೈಲ್ ಕಂಪನಿಯ ಮ್ಯಾನೇಜರ್ ಸಚಿನ್ ಮಾನವ್ ಸಲ್ಲಿಸಿದ ದೂರಿನಲ್ಲಿ, ಫರೂಖಾಬಾದ್ ಜಿಲ್ಲೆಯ ಚಾಲಕ ಮುನೀಶ್ ಯಾದವ್ ಅವರು ಅಕ್ಟೋಬರ್ 5 ರಂದು ಬೆಳಿಗ್ಗೆ ಗ್ರೇಟರ್ ನೋಯ್ಡಾದಿಂದ ಮೊಬೈಲ್‌ಗಳನ್ನು ತುಂಬಿದ್ದ ಟ್ರಕ್ ಅನ್ನು ತೆಗೆದುಕೊಂಡು ಬೆಂಗಳೂರಿಗೆ ಹೊರಟಿದ್ದರು. ಫರಾಹ್ ಪೊಲೀಸ್ ಠಾಣೆ ಪ್ರದೇಶದ ಗ್ವಾಲಿಯರ್ ಬೈಪಾಸ್‌ನಲ್ಲಿ ಇಬ್ಬರು ಪ್ರಯಾಣಿಕರ ಸೋಗಿನಲ್ಲಿ ವಾಹನವನ್ನು ಹತ್ತಿದ್ದಾರೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಮಾರ್ತಾಂಡ್ ಪ್ರಕಾಶ್ ಸಿಂಗ್ ಹೇಳಿದ್ಧಾರೆ.

ಟ್ರಕ್ ಝಾನ್ಸಿಯ ಬಬಿನಾ ಟೋಲ್ ಅನ್ನು ದಾಟಿದ ತಕ್ಷಣ, ದುಷ್ಕರ್ಮಿಗಳು ಚಾಲಕನನ್ನು ಥಳಿಸಿ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ವಾಹನದಿಂದ ಹೊರಗೆ ಎಸೆದು ಟ್ರಕ್‌ನೊಂದಿಗೆ ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಶಿಯೋಪುರ್ ಜಿಲ್ಲೆಯ ಮಾನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಖಾಲಿ ಟ್ರಕ್ ಅನ್ನು ಬಿಟ್ಟು ಪರಾರಿಯಾಗಿದ್ದಾರೆ.

ಈ ಸಂಬಂಧ ದೂರು ನೀಡಲು ಮಧ್ಯಪ್ರದೇಶ ಪೊಲೀಸರನ್ನು ಸಂಪರ್ಕಿಸಿದ್ದು, ದೂರು ದಾಖಲಿಸಿಕೊಳ್ಳಲು ಅವರು ನಿರಾಕರಿಸಿದರು ಎಂದು ದೂರುದಾರರು ಆರೋಪಿಸಿದ್ದಾರೆ. ‌ಬಳಿಕ, ಆಗ್ರಾದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಾಗಿದ್ದು, ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸದ್ಯ, ಮಧ್ಯಪ್ರದೇಶದ ಮಾನ್ಪುರ್ ಪೊಲೀಸರ ವಶದಲ್ಲಿ ಟ್ರಕ್ ಇದೆ. ಟ್ರಕ್‌ನಲ್ಲಿ ರಿಯಾಲಿಟಿ ಮತ್ತು ಒಪ್ಪೊ ಕಂಪನಿಯ 8,990 ಮೊಬೈಲ್ ಫೋನ್‌ಗಳಿದ್ದವು. ಅವುಗಳ ಮೌಲ್ಯ ಸುಮಾರು ₹7 ಕೋಟಿ ಎಂದು ಎಸ್‌ಪಿ ತಿಳಿಸಿದ್ದಾರೆ.

ಪ್ರಕರಣದ ತನಿಖೆಗಾಗಿ ಪೊಲೀಸ್ ತಂಡವನ್ನು ರಚಿಸಲಾಗಿದೆ, ಈ ವಿಷಯದಲ್ಲಿ ಮಧ್ಯಪ್ರದೇಶ ಪೊಲೀಸರನ್ನು ಸಹ ಸಂಪರ್ಕಿಸಲಾಗುತ್ತಿದೆ ಎಂದು ಅವರು ಹೇಳಿದರು. ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ಕಣ್ಗಾವಲಿನ ಮೂಲಕ ದುಷ್ಕರ್ಮಿಗಳನ್ನು ಪತ್ತೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಎಸ್‌ಪಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!