ರಾಜಕೀಯ ಕುಟುಂಬವಿಲ್ಲ, ಜಾತಿಯ ಹಂಗಿಲ್ಲ, ಜನಾಶೀರ್ವಾದದಿಂದಲೇ ಜನಸೇವೆ: ಪ್ರಧಾನಿ ಮೋದಿ
ಸೂರತ್: ಯಾವುದೇ ರಾಜಕೀಯ ಹಿನ್ನೆಲೆ ಅಥವಾ ವಂಶ ಪರಂಪರೆಯ ಬೆಂಬಲವಿಲ್ಲದೆ ದೇಶದ ಸೇವೆ ಮಾಡಲು ಜನರು ತಮಗೆ ಅವಕಾಶ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಒಂದು ಸಾಮಾನ್ಯ ಬಡ ಕುಟುಂಬದಿಂದ ಬಂದ ನನಗೆ ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ ಇಂದು ಪ್ರಧಾನಿಯಾಗಿ ದೇಶದ ಸೇವೆ ಸಲ್ಲಿಸುವ ಭಾಗ್ಯ ಕಲ್ಪಿಸಿದ್ದಾರೆ ಎಂದರು.
ಸೂರತ್ ನಲ್ಲಿ ಬಾಲಕರ ವಸತಿ ನಿಲಯ ಶಿಲಾನ್ಯಾಸ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮೋದಿ, ಕೇವಲ ಜನರ ಆಶೀರ್ವಾದದಿಂದ ಕಳೆದ 20 ವರ್ಷಗಳಿಂದ ಸರ್ಕಾರದ ನಾಯಕನಾಗಿ ಮುಂದುವರಿದಿದ್ದೇನೆ ಎಂದು ಹೇಳಿದರು.
‘ನಾನು ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದವನು. ನನಗೆ ಯಾವುದೇ ರಾಜಕೀಯ, ವಂಶ ಪರಂಪರೆ ಅಥವಾ ಜಾತಿಯ ಬೆಂಬಲವಿಲ್ಲ. ಆದರೆ ನಿಮ್ಮೆಲ್ಲರ ಆಶೀರ್ವಾದದಿಂದ 2001 ರಿಂದ ಗುಜರಾತ್ ಗೆ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದು ಮೋದಿ ಹೇಳಿದರು. ಇದೇ ಆಶೀರ್ವಾದ ಶಕ್ತಿಯಿಂದ 20 ವರ್ಷಗಳ ಕಾಲ ದೇಶದ ಸೇವೆಯಲ್ಲಿ ಮುಂದುವರಿದಿದ್ದೇನೆ ಎಂದು ಅವರು ಹೇಳಿದರು.
ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ, ಪ್ರಸ್ತುತ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಲು ತಮಗೆ ಅವಕಾಶ ನೀಡಿದ್ದಾರೆ ಎಂದು ಅವರು ಹೇಳಿದರು. ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ ಭಾಯಿ ಪಟೇಲ್ ತೋರಿಸಿದ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಮೋದಿ ಸೂಚಿಸಿದರು. ಜಾತಿ, ಧರ್ಮಗಳು, ನಂಬಿಕೆಗಳು ನಮಗೆ ಅಡ್ಡಿಯಾಗಬಾರದು ಎಂದು ಸರ್ದಾರ್ ಪಟೇಲ್ ಹೇಳುತ್ತಿದ್ದರು ಎಂದು ಪ್ರಧಾನಿ ಮೋದಿ ನೆನಪಿಸಿದರು.