ಸಲೀಂ- ಉಗ್ರಪ್ಪ ಸಂಭಾಷಣೆಗೂ ನನಗೂ ಸಂಬಂಧವಿಲ್ಲ; ಪಕ್ಷದ ಶಿಸ್ತುಪಾಲನಾ ಸಮಿತಿ ತೀರ್ಮಾನಕ್ಕೆ ಬದ್ಧ: ಡಿಕೆ ಶಿವಕುಮಾರ್
ಬೆಂಗಳೂರು: ಸಲೀಂ ಮತ್ತು ವಿ ಎಸ್ ಉಗ್ರಪ್ಪನವರ ಸಂಭಾಷಣೆಗಳಿಗೂ ನನಗೂ ಸಂಬಂಧವಿಲ್ಲ, ಪಕ್ಷದ ಶಿಸ್ತು ಪಾಲನಾ ಸಮಿತಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಸಲೀಂ-ಉಗ್ರಪ್ಪನವರ ಸಂಭಾಷಣೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದು ಪಕ್ಷಕ್ಕೆ ಮತ್ತು ನನಗೆ ಖಂಡಿತಾ ಮುಜುಗರವಾಗಿದೆ. ಅದಕ್ಕೇ ಇವತ್ತು ನಾನು ಮಾಧ್ಯಮಗಳ ಮುಂದೆ ಬಂದು ಕುಳಿತಿರುವುದು. ನಾನು ಪಕ್ಷದಲ್ಲಿ ಅಶಿಸ್ತು, ಗುಂಪುಗಾರಿಕೆಯನ್ನು ಸಹಿಸುವುದಿಲ್ಲ, ನಾನು ಅದನ್ನು ಪ್ರೋತ್ಸಾಹಿಸುವುದೂ ಇಲ್ಲ. ಶಿಸ್ತು ಪಾಲನಾ ಸಮಿತಿಯ ಅಧ್ಯಕ್ಷರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿದರು.
ನಾನು ಯಾವ ಪರ್ಸೆಂಟೇಜ್ ನಲ್ಲಿ ಭಾಗಿಯಾಗಿಲ್ಲ, ಭ್ರಷ್ಟಾಚಾರಕ್ಕೂ ನನಗೂ ದೂರ, ಪರ್ಸೆಂಟೇಜ್ ತೆಗೆದುಕೊಳ್ಳುವ ಅಗತ್ಯ ನನಗಿಲ್ಲ. ರಾಜಕಾರಣದಲ್ಲಿ ಹಾರ ಹಾಕಿ ಸನ್ಮಾನ ಮಾಡುವವರಿರುತ್ತಾರೆ, ಹೊಗಳುವವರು, ತೆಗಳುವವರು, ಜೈಕಾರ ಹಾಕುವವರು, ಇಲ್ಲಿ ಕಲ್ಲು, ಚಪ್ಪಲಿ, ಮೊಟ್ಟೆ ಎಸೆಯುವವರೂ ಇರುತ್ತಾರೆ, ನಾವು ರಾಜಕಾರಣದಲ್ಲಿ ಎಲ್ಲವನ್ನೂ ಸ್ವೀಕರಿಸಲು ಸಿದ್ಧರಾಗಿರಬೇಕು ಎಂದಾಗ ಹಾಗಾದರೆ ಇವರು ಯಾವ ವರ್ಗಕ್ಕೆ ಸೇರಿದವರು ಎಂದಾಗ ಅದನ್ನು ನೀವೇ ನಿರ್ಧಾರ ಮಾಡಿ ಎಂದರು.
ನಿನ್ನೆ ಇಬ್ಬರು ನಾಯಕರು ಮಾತನಾಡಿಕೊಂಡಿರುವುದು ಆಂತರಿಕ, ಬಹಿರಂಗವಾಗಿ ಹೇಳಿರುವ ಮಾತಲ್ಲ. ಅದಕ್ಕೂ ನನಗೂ ಸಂಬಂಧವಿಲ್ಲ, ಆದರೆ ಶಿಸ್ತು ಪಾಲನಾ ಸಮಿತಿ ಕ್ರಮ ತೆಗೆದುಕೊಳ್ಳುವುದಂತೂ ಪಕ್ಕಾ, ಪಕ್ಷದ ಸಂವಿಧಾನದ ಚೌಕಟ್ಟಿನೊಳಗೆ ಕ್ರಮ ತೆಗೆದುಕೊಳ್ಳಬಹುದು ಎಂದರು. ಗೃಹ ಸಚಿವರು ದೂರು ಸಲ್ಲಿಸಿದರೆ ತೆಗೆದುಕೊಳ್ಳುತ್ತೇನೆ ಎಂದಿದ್ದಾರಂತೆ, ಅವರೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವುದಾದರೆ ದಾಖಲಿಸಿಕೊಳ್ಳಲಿ ಎಂದರು.
ಡಿಕೆಶಿ ಅಧ್ಯಕ್ಷರ ಆದ ಮೇಲೆ ತಕ್ಕಡಿ ಏರುತ್ತಿಲ್ಲವಲ್ಲ ಎಂದು ಸಲೀಂ ಹೇಳಿದ್ದ ಇನ್ನೊಂದು ಮಾತಿನ ಬಗ್ಗೆ ಕೇಳಿದಾಗ ನನ್ನ ತಕ್ಕಡಿ ರಾಜ್ಯದ ಜನ, ರಾಜ್ಯದ ಜನತೆ ನೀಡುವ ಮತಗಳು ನನ್ನ ತಕ್ಕಡಿ ಎಂದರು.
ಮಾಧ್ಯಮಗಳು ನಿನ್ನೆ ನಾಯಕರ ಸಂಭಾಷಣೆಗಳನ್ನು ಪ್ರಸಾರ ಮಾಡಿದ್ದು ತಪ್ಪು ಎಂದು ನಾನು ಹೇಳುವುದಿಲ್ಲ. ಈ ಹಿಂದೆ ಅನಂತ್ ಕುಮಾರ್ ಮತ್ತು ಯಡಿಯೂರಪ್ಪನವರು ಹೇಳಿದ್ದ ಮಾತುಗಳನ್ನು, ಹೆಚ್ ವಿಶ್ವನಾಥ್, ಯತ್ನಾಳ್ ಅವರು ಹೇಳಿದ್ದ ಮಾತುಗಳನ್ನೂ ತೋರಿಸಿದ್ದೀರಿ, ಹಾಗೆಯೇ ಇದನ್ನು ಕೂಡ ಮಾಧ್ಯಮಗಳಲ್ಲಿ ತೋರಿಸಿದ್ದೀರಷ್ಟೆ, ನಾನು ತಪ್ಪು ಎಂದು ಹೇಳುವುದಕ್ಕಾಗುತ್ತದೆಯೇ ಎಂದು ಕೇಳಿದರು.
ಇನ್ನು ಬಿಜೆಪಿ ನಾಯಕರು ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಬಗ್ಗೆ ಸತೀಶ್ ಜಾರಕಿಹೊಳಿಯವರ ಮತ್ತು ಹೆಚ್ ವಿಶ್ವನಾಥ್, ಬಸವಗೌಡ ಪಾಟೀಲ್ ಯತ್ನಾಳ್ ಮಾಡಿದ್ದ ಭ್ರಷ್ಟಾಚಾರದ ಆರೋಪದ ಬಗ್ಗೆ ಡಿ ಕೆ ಶಿವಕುಮಾರ್ ಮಾತನಾಡಿದರು. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿಯೇ ನಡೆಯುವುದು, ಅದರ ನಾಯಕರು ಕೋವಿಡ್ ಹೆಸರಿನಲ್ಲಿ ಸಾಕಷ್ಟು ಅಕ್ರಮ ಹಣ ಮಾಡಿದ್ದಾರೆ ಎಂದು ಕೂಡ ಆರೋಪಿಸಿದರು.