ವಿದ್ಯಾರ್ಥಿಗಳಿಗೆ ಸಂಘಪರಿವಾರ ಹಿನ್ನೆಲೆಯ ದುಷ್ಕರ್ಮಿಗಳಿಂದ ಹಲ್ಲೆ- ಪಿಎಫ್ಐ ಕಳವಳ

ಬಾಗಲಕೋಟೆ: ಜಿಲ್ಲೆಯ ಇಳಕಲ್ ನಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಸಂಘಪರಿವಾರದ ಹಿನ್ನೆಲೆಯ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಗೆ ಪಾಪ್ಯುಲರ್ ಫ್ರಂಟ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಇಳ್ಕಲ್ ಪಟ್ಟಣದಲ್ಲಿ ರಿಹಾನ್ ಎಂಬ ಪ್ರೌಢ ಶಾಲಾ ವಿದ್ಯಾರ್ಥಿಯೋರ್ವ ಸಾಂಪ್ರದಾಯಿಕ ಟೋಪಿ ಧರಿಸಿ ಖಾಸಗಿ ಟ್ಯೂಷನ್ ತರಗತಿಗೆ ತೆರಳಿದ್ದ. ಇದನ್ನು ಆಕ್ಷೇಪಿಸಿ 15-20 ಮಂದಿಯ ತಂಡವು ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ನಂತರದಲ್ಲಿ ಅದೇ ಘಟನೆಗೆ ಸಂಬಂಧಿಸಿ ಮುಹಮ್ಮದ್, ಸಾಹಿಲ್ ಮತ್ತು ಸಮೀರ್ ಎಂಬ ವಿದ್ಯಾರ್ಥಿಗಳ ಮೇಲೆಯೂ ದುಷ್ಕರ್ಮಿಗಳ ತಂಡವು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಘಟನೆಯಲ್ಲಿ ಗಾಯಗೊಂಡವರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ದುಷ್ಕರ್ಮಿಗಳು ಆಸ್ಪತ್ರೆಯ ಒಳಗೂ ರಂಪಾಟ ನಡೆಸಿ ಜೀವ ಬೆದರಿಕೆ ಹಾಕಿರುವ ವಿಡಿಯೋ ಕೂಡ ವೈರಲ್ ಆಗಿದೆ. ಇಷ್ಟಾಗಿಯೂ ಕೂಡಲೇ ಸ್ವಯಂ ಕಾರ್ಯಪ್ರವೃತ್ತರಾಗಬೇಕಾಗಿದ್ದ ಪೊಲೀಸರು, ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಗಳ ಹೇಳಿಕೆಯನ್ನು ದಾಖಲಿಸಲು ವಿಳಂಬಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿರುವುದಕ್ಕೆ ಮತ್ತು ಆಸ್ಪತ್ರೆಯಲ್ಲಿ ಬೆದರಿಕೆ ಒಡ್ಡಿರುವುದಕ್ಕೆ ವೈರಲ್ ಆಗಿರುವ ವಿಡಿಯೋ ಪ್ರಮುಖ ಸಾಕ್ಷಿ. ಘಟನೆಯ ಸತ್ಯಾಸತ್ಯತೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಪ್ರಕರಣ ದಾಖಲಿಸಬೇಕಾಗಿದ್ದ ಪೊಲೀಸರು ಹಲ್ಲೆಗೊಳಗಾದ ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆಯೂ ಪ್ರಕರಣ ದಾಖಲಿಸಿರುವುದು ಆಘಾತಕಾರಿಯಾಗಿದೆ.

ರಾಜ್ಯದಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಪಡಿಸಿಕೊಂಡು ಸಂಘಪರಿವಾರದ ದುಷ್ಕರ್ಮಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಅರ್ಬಾಝ್ ಬರ್ಬರ ಹತ್ಯೆ ಘಟನೆ ಮಾಸುವ ಮುನ್ನವೇ ಬಾಗಲಕೋಟೆಯಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಬೀದಿಯಲ್ಲಿ ಮಾರಣಾಂತಿಕವಾಗಿ ಥಳಿಸಲಾಗಿದೆ. ಪ್ರಕರಣ ದಾಖಲಿಸುವಲ್ಲಿ ಪೊಲೀಸರು ತೋರುತ್ತಿರುವ ತಾರತಮ್ಯ ನೀತಿ ಮತ್ತು ಏಕಪಕ್ಷೀಯ ನಡೆಯು ಸಂಘಪರಿವಾರದ  ಶಕ್ತಿಗಳಿಗೆ ಕಾನೂನು ಕೈಗೆತ್ತಿಕೊಳ್ಳಲು ಬಹಳಷ್ಟು ಉತ್ತೇಜನ ನೀಡುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ಕ್ರಮ ಜರಗಿಸಿ ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು ಮತ್ತು ಸರಕಾರವೂ ಕೂಡಲೇ ಎಚ್ಚೆತ್ತುಕೊಂಡು ಮುಸ್ಲಿಮರ ಭದ್ರತೆಯನ್ನು ಖಾತರಿಪಡಿಸಲು ಮುಂದಾಗಬೇಕೆಂದು ನಾಸಿರ್ ಪಾಶ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!