ಜಾಗತಿಕ ಬಂಟರ ಸಂಘಗಳ ಒಕ್ಕೂಟ ಸಮಾಜದಲ್ಲಿರುವ ನೊಂದವರ ನೆರಳಾಗಿದೆ ರಾಜೇಂದ್ರ ಸಿಂಗ್

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇಂದು ಸಮಾಜದಲ್ಲಿ ನೊಂದವರ, ಕಷ್ಟದಲ್ಲಿರುವವರ ನೆರಳಾಗಿದೆ. ಇಂದು ಸಂಪತ್ತು ಗಳಿಸಲು ನೂರಾರು ದಾರಿಯಿದೆ. ಆದರೆ ಮಾಡಿದ ಸಂಪತ್ತಿನಲ್ಲಿ ಬಡವರಿಗೆ ದಾನ ಮಾಡೋ ಮನಸ್ಸಿರೋರು ಸಿಗೋದು ತುಂಬಾ ಕಷ್ಟ. ಆದರೆ ಒಕ್ಕೂಟದ ಅಧ್ಯಕ್ಷ  ಐಕಳ ಹರೀಶ್ ಶೆಟ್ಟಿ ಅವರು ದಾನಿಗಳ ಮೂಲಕ ದಾನ ಸಂಗ್ರಹಿಸಿ ನೊಂದವರಿಗೆ, ಕಷ್ಟದಲ್ಲಿರುವವರಿಗೆ ನೀಡುವ ಮೂಲಕ ಸಮಾಜದ ಜನರಿಗೆ ನೆರಳಾಗಿದ್ದಾರೆ ಎಂದು ಚಲನ ಚಿತ್ರ ರಂಗದ ಹಿರಿಯ ಖ್ಯಾತ ನಿರ್ದೇಶಕ ಎಸ್. ವಿ ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.

ಬಂಟ್ಸ್ ಹಾಸ್ಟೇಲ್‌ನಲ್ಲಿರುವ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಇಂದು ದಾನಧರ್ಮ ಮರೆಯಾಗಿದ್ದು,  ಭಯೋತ್ಪಾದನೆ ಮೋಸ, ದರೋಡೆ ಸಕ್ರೀಯವಾಗಿದೆ. ನಮ್ಮ ಭಗವದ್ಗೀತೆಯಲ್ಲಿ ದಾನ ಧರ್ಮದ ಮಹತ್ವದ ಬಗ್ಗೆ ಉಲ್ಲೇಖವಿದೆ. ಆದರೆ  ಅದನ್ನು ಅನುಸರಿಸೋದು ಕಡಿಮೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇಂದು ಸಮಾಜದಿಂದ ಸಂಗ್ರಹಿಸಿ ಸಮಾಜಕ್ಕೆ ನೀಡುವುದು ದೊಡ್ಡ ದಾನ ಹಾಗೂ ಇದೊಂದು ಸಮಾಜ ಸೇವಾ ಕಾರ್ಯ. ಇಂತಹ ಕಾರ್ಯಗಳು ಒಕ್ಕೂಟದಿಂದ ನಿರಂತರ ನಡೆಯಲಿ ಎಂದು ಅವರು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಒಕ್ಕೂಟದ ನಿರ್ದೇಶಕ ಪ್ರವೀಣ್ ಭೋಜ ಶೆಟ್ಟಿ ಅವರು ಒಂದು ಕಾರ್ಪೋರೇಟ್ ಸಂಸ್ಥೆ ಮಾಡುವ ಕೆಲಸವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಾಡುತ್ತಿದೆ. ಸಮಾಜ ಸೇವೆ ಹೇಗೆ ಮಾಡಬೇಕೆಂಬುದನ್ನು ಐಕಳ ಅವರಿಂದ ತಿಳಿಯಬಹುದು. ಸಮಾಜದಿಂದ ಪಡೆದು ಸಮಾಜಕ್ಕೆ ನೀಡುವ ಮೂಲಕ ಒಕ್ಕೂಟದ ಸೇವಾ ಕಾರ್ಯದಲ್ಲಿ ನಾನೂ ಕೈ ಜೋಡಿಸುತ್ತೇನೆ ಎಂದರು.

ಆಸರೆ ಇಲ್ಲದವರಿಗೆ ಒಕ್ಕೂಟ ಆಸರೆ. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, ಉಳ್ಳವರಿಗೆ ಎಲ್ಲರೂ ಇದ್ದಾರೆ. ಆದರೆ ಏನೂ ಆಸರೆಯಿಲ್ಲದವರಿಗೆ  ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದೆ. ಲಾಕ್‌ಡೌನ್ ಸಂದರ್ಭದಲ್ಲೂ ಸಹಾಯ ಕೇಳಿ ಅರ್ಜಿ ಹಾಕಿದವರನ್ನು  ಹಿಂದೆ ಕಳುಹಿಸಲಿಲ್ಲ.  ಒಕ್ಕೂಟದ ಸೇವಾ ಕಾರ್ಯ ನಿರಂತರ ನಡೆಯಲಿದೆ. ಮದುವೆ, ಶಿಕ್ಷಣ, ಆರೋಗ್ಯ, ಹೀಗೆ ಬೇರೆ ಬೇರೆ ಸಮಸ್ಯೆಗಳಿಗೆ ಸಂಬಂಧಿಸಿ ಒಕ್ಕೂಟಕ್ಕೆ ಬಂದ ಅರ್ಜಿಗಳೆಲ್ಲವನ್ನೂ ಪರಿಶೀಲಿಸಿ ಪ್ರಸಾದ ರೂಪದಲ್ಲಿ ಸಹಾಯ ಮಾಡಿದ್ದೇವೆ. ಇಂತಹ ಕಾರ್ಯಕ್ಕೆ ಸಮಾಜದಲ್ಲಿರುವ ದಾನಿಗಳು ಉದ್ಯಮಿಗಳು ಕೈ ಜೋಡಿಸಿದರೆ ಕೆಳಸ್ತರದಲ್ಲಿರುವ ಸಮಾಜದವರಿಗೆ ಸಹಾಯ ಮಾಡಲು ಅನುಕೂಲವಾಗುತ್ತದೆ ಎಂದರು.

ಸಮಾರಂಭದಲ್ಲಿ ಖ್ಯಾತ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಲಯನ್ಸ್ ಗವರ್ನರ್ ವಸಂತ ಶೆಟ್ಟಿ,ಒಕ್ಕೂಟದ ಪೋಷಕರು ಹಾಗೂ ಮುಂಬೈ ಮಾತೃಭೂಮಿಯ ಕೋ.ಆ.ಸೊಸೈಟಿಯ ಚೆಯರ್ ಮ್ಯಾನ್ ರತ್ನಾಕರ ಶೆಟ್ಟಿ ಮುಂಡ್ಕೂರು, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿ, ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್,  ವಿವಿಧ  ಬಂಟರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಉಪಸ್ಥಿತರಿದ್ದರು.ಸಮಾರಂಭದಲ್ಲಿ ಪತ್ರಕರ್ತರಾದ  ಮಾಲತಿ ಶೆಟ್ಟಿ ಮಾಣೂರು ಮತ್ತು ನಿಶಾಂತ್ ಶೆಟ್ಟಿ ಕಿಲೆಂಜೂರು ಅವರನ್ನು ಸನ್ಮಾನಿಸಲಾಯಿತು. ಎಸ್.ವಿ ರಾಜೇಂದ್ರ ಸಿಂಗ್ ಬಾಬು, ವಿಜಯ ಕುಮಾರ್ ಕೊಡಿಯಾಲ್‌ಬೈಲ್, ರತ್ನಾಕರ ಶೆಟ್ಟಿ ಮುಂಡ್ಕೂರು, ಲಯನ್ ವಸಂತ ಶೆಟ್ಟಿ ಅವರನ್ನು ಗೌರವಿಸಲಾಯಿತು. ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಪ್ರಸ್ತಾವಿಕವಾಗಿ ಮಾತನಾಡಿದರು. ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್ ಫಲಾನುಭವಿಗಳ ಹೆಸರು ವಾಚಿಸಿದರು. ಕೊಲ್ಲಾಡಿ ಬಾಲಕೃಷ್ಣ ರೈ, ಸಾಯಿನಾಥ್ ಶೆಟ್ಟಿ ಮುಂಡ್ಕೂರು ಸನ್ಮಾನ ಪತ್ರ ವಾಚಿಸಿದರು. ಸಮಾರಂಭದಲ್ಲಿ ವೈದ್ಯಕೀಯಕ್ಕೆ 10 ಮಂದಿ ಫಲಾನುಭವಿಗಳಿಗೆ, ಶಿಕ್ಷಣಕ್ಕೆ ೬ ಮಂದಿ ಫಲಾನುಭವಿಗಳಿಗೆ, ಮದುವೆಗೆ ಮೂರು ಮಂದಿ ಫಲಾನುಭವಿಗಳಿಗೆ ಮತ್ತು ಮನೆ ನಿರ್ಮಾಣ ಹಾಗೂ ಮನೆ ರಿಪೇರಿಗೆ 18 ಮಂದಿ ಫಲಾನುಭವಿಗಳಿಗೆ ಸುಮಾರು 12 ಲ.ರೂ ವನ್ನು ವಿತರಿಸಲಾಯಿತು. ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ ಶೆಟ್ಟಿ ವಂದಿಸಿದರು. ಸಿಂಧ್ಯಾ ಶೆಟ್ಟಿ ಪ್ರಾರ್ಥನೆಗೈದರು. ಶರತ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!