ದೇಶಾದ್ಯಂತ ಇಂದು ಮಧ್ಯಾಹ್ನದವರೆಗೆ 1 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿಕೆ
ನವದೆಹಲಿ: ಇಂದು ಮಧ್ಯಾಹ್ನದವರೆಗೆ ದೇಶದಲ್ಲಿ ಸುಮಾರು 1 ಕೋಟಿಗೂ ಅಧಿಕ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ 71 ಜನ್ಮ ದಿನಾಚರಣೆ ಸಂದರ್ಭದಲ್ಲಿ 2 ಕೋಟಿ ಲಸಿಕೆ ನೀಡುವ ಗುರಿಯೊಂದಿಗೆ ದೇಶಾದ್ಯಂತ ನೀಡಲಾಗುತ್ತಿರುವ ಕೋವಿಡ್ ಲಸಿಕೆ ಪತ್ತೆಗಾಗಿ ಟಿಕ್ಕರ್ ಒಂದನ್ನು ಸರ್ಕಾರ ಸೇರ್ಪಡೆ ಮಾಡಿದೆ.
ಕೋವಿಡ್-19 ಸಾಂಕ್ರಾಮಿಕ ವಿರುದ್ಧ ದೇಶದಲ್ಲಿ ಲಸಿಕೆ ಹಾಕುವವರ ಅವಿರತ ಶ್ರಮವನ್ನು ಕೊಂಡಾಡುತ್ತಿದ್ದು,ನೈಜ ಸಮಯದಲ್ಲಿ ಲಸಿಕೆ ಹಾಕುವುದನ್ನು ತೋರಿಸಲು ನಾವು ಟಿಕ್ಕರ್ ವೊಂದನ್ನು ಸೇರಿಸಿದ್ದೇವೆ. ಪ್ರಸ್ತುತ ನಾವು ಪ್ರತಿ ನಿಮಿಷಕ್ಕೆ 42 ಸಾವಿರ ಅಥವಾ ಸೆಕೆಂಡ್ ಗೆ 700 ಲಸಿಕೆ ನೀಡಲು ಎದುರು ನೋಡುತ್ತಿರುವುದಾಗಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯಸ್ಥ ಆರ್’ಎಸ್’ ಶರ್ಮಾ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಬಿಜೆಪಿ ವತಿಯಿಂದ 20 ದಿನಗಳ ಮೆಗಾ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದು ಅಕ್ಟೋಬರ್ 7ರವರೆಗೆ ಮುಂದುವರೆಯಲಿದೆ. ಸೇವಾ ಮತ್ತು ಸಮರ್ಪಣಾ ಅಭಿಯಾನವಾಗಿ ಮೋದಿ ಜನ್ಮ ದಿನದಂದು ದೇಶಾದ್ಯಂತ ಕೋವಿಡ್-19 ಲಸಿಕಾ ಅಭಿಯಾನ ನಡೆಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಿದೆ.
ಆಗಸ್ಟ್ 17 ರಂದು ಒಂದೇ ದಿನ 88.13 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಈವರೆಗೂ ಇದೇ ಅತ್ಯಂತ ಹೆಚ್ಚು ಲಸಿಕೆ ನೀಡಿದ ದಿನವಾಗಿತ್ತು. ಆದರೆ, ಇಂದು ಮಧ್ಯಾಹ್ನದವರೆಗೂ 1 ಕೋಟಿ ಲಸಿಕೆ ನೀಡಲಾಗಿದ್ದು, ದಿನದ ಅಂತ್ಯಕ್ಕೆ 2 ಕೋಟಿ ಡೋಸ್ ಗೂ ಅಧಿಕ ಲಸಿಕೆ ನೀಡುವ ನಿರೀಕ್ಷೆ ಹೊಂದಲಾಗಿದೆ.