ದುಡಿಯಲು ಅವಕಾಶ ಮಾಡಿಕೊಡಿ- ಕಲಾವಿದ, ನಿರ್ದೇಶಕರ ಮನವಿ
ಮಂಗಳೂರು: ಕೋವಿಡ್ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿ, ಶಾಲೆ ಕಾಲೇಜುಗಳು ಸಹಿತ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದರೂ ಜಿಲ್ಲೆಯಲ್ಲಿ ಸಿನಿಮಾ ಮಂದಿರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಅವಕಾಶ ನೀಡದಿರುವುದು ಹಾಗೂ ನಾಟಕ ತಂಡಗಳಿಗೆ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಡದಿರುವುದರಿಂದ ಕಲಾವಿದರ ಪರಿಸ್ಥಿತಿ ಹದಗೆಟ್ಟಿದೆ.
ನಾಟಕ, ಸಿನಿಮಾದಿಂದಲೇ ಜೀವನ ಸಾಗಿಸುವ ಕಲಾವಿದರ ಸ್ಥಿತಿ ತುಂಬಾ ಕಠಿಣವಾಗಿದೆ. ಹೀಗಾಗಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರಾಜ್ಯದ ಮುಖ್ಯಮಂತ್ರಿಯವರಿಗೆ ಜಿಲ್ಲೆಯಲ್ಲಿರುವ ಕಲಾವಿದರ ಸ್ಥಿತಿಗತಿಯನ್ನು ಅರ್ಥಮಾಡಿಸಿ ಸಿನಿಮಾ, ನಾಟಕ ಪ್ರದರ್ಶನಗಳಿಗೆ ಪೂರ್ಣ ಪ್ರಮಾಣದಲ್ಲಿ ಅವಕಾಶ ನೀಡಬೇಕೆಂದು ಜಿಲ್ಲೆಯ ಹಿರಿಯ ಕಲಾವಿದರಾದ ದೇವದಾಸ್ ಕಾಪಿಕಾಡ್, ವಿಜಯ ಕುಮಾರ್ ಕೊಡಿಯಾಲ್ ಬೈಲ್, ಕಿಶೋರ್ ಡಿ ಶೆಟ್ಟಿ, ಸಿನಿಮಾ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಹಾಗೂ ಮೋಹನ್ ಕೊಪ್ಪಲ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಪ್ರಕರಣದಿಂದ ಕಲಾವಿದರು ಸಂಕಷ್ಟಕ್ಕೆ ಈಡಾಗಿದ್ದಾರೆ. ನಾಟಕ, ಸಿನಿಮಾಗಳು ಇಲ್ಲದೆ ಕಲಾವಿದರು ನಿರ್ಗತಿಕರಾಗಿದ್ದಾರೆ. ಅದನ್ನೇ ನಂಬಿಕೊಂಡು ನೂರಾರು ಕುಟುಂಬಗಳಿವೆ. ಈ ಬಗ್ಗೆ ಜಿಲ್ಲಾಡಳಿತ, ರಾಜ್ಯ ಸರಕಾರ ಸ್ಪಂದಿಸಬೇಕಾಗಿದೆ. ಕಲಾವಿದರು ದುಡಿದು ತಿನ್ನುವವರು. ಕೋವಿಡ್ ಸಂಕಷ್ಟದಿಂದ ಯಾರಿಗೂ ಕೆಲಸ ಇಲ್ಲ. ಜಿಲ್ಲೆಯಲ್ಲಿ 30ಕ್ಕೂ ಮಿಕ್ಕಿದ ನಾಟಕ ತಂಡಗಳಿಗೆ, ಐದು ಸಾವಿರಕ್ಕೂ ಮಿಕ್ಕಿ ಕಲಾವಿದರಿದ್ದಾರೆ. ಸಂಗೀತ, ನಾಟಕ, ಸಿನಿಮಾ ಹೀಗೆ ಸಾಂಸ್ಕೃತಿಕ ರಂಗವೇ ನಿಂತು ಹೋಗಿದೆ.
ಕಲಾವಿದರು ಸಂಕಷ್ಟದಲ್ಲಿದ್ದಾಗ ಸರಕಾರ ಕಲಾವಿದರಿಗೆ ಏನೂ ನೀಡಿಲ್ಲ. ನಮಗೆ ನಾಟಕ ಪ್ರದರ್ಶನಕ್ಕೆ, ಸಿನಿಮಾ ಮಂದಿರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ನೀಡಿ. ನಮ್ಮ ಕಲಾವಿದರ ಕುಟುಂಬ ಪೋಷಣೆಗೆ ಅವಕಾಶ ನೀಡಿ ಎಂದು ನಾಟಕ, ಸಿನಿಮಾ ನಿರ್ದೇಶಕ ದೇವದಾಸ್ ಕಾಪಿಕಾಡ್ ತಿಳಿಸಿದರು.ಜಿಲ್ಲೆಯಲ್ಲಿ ಅನೇಕ ವೃತ್ತಿ ಪರ ನಾಟಕ ತಂಡಗಳಿವೆ. ಇಲ್ಲಿಯ ಸಂಸ್ಕೃತಿ , ಭಾಷೆಗೆ ತುಳು ನಾಟಕಗಳು, ತುಳು ಸಿನಿಮಾಗಳು ವಿಶೇಷ ಕೊಡುಗೆ ನೀಡಿದೆ. ಶ್ರೀ ಕೃಷ್ಣ ಜನ್ಮಾಷ್ಠಮಿ, ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ನಾಟಕ ಪ್ರದರ್ಶನಗಳಿಗೆ ಅವಕಾಶ ನೀಡದೆ ಕಲಾವಿದರು ಮನೆಯಲ್ಲೇ ಕೂರುವಂತಾಗಿದೆ.ಮುಂದೆ ದಸರಾ ದೀಪಾವಳಿ ಹಬ್ಬ ಬರುತ್ತಿದೆ. ಆ ದಿನಗಳಲ್ಲಿ ಎಲ್ಲಾ ತಂಡಗಳಿಗೂ ಪ್ರತೀ ದಿನ ನಾಟಕಗಳಿರುತ್ತದೆ. ಹೀಗಾಗಿ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು.
ಸಂಸದರಾದ ನಳಿನ್ ಕುಮಾರ್ ಕಟೀಲ್, ಸಚಿವರಾದ ಸುನೀಲ್ ಕುಮಾರ್, ಎಸ್ ಅಂಗಾರ, ಕೋಟಾ ಶ್ರೀನಿವಾಸ್ ಪೂಜಾರಿ, ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್ ಮೊದಲಾದವರೆಲ್ಲಾ ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆ ಪ್ರಾರಂಭಿಸಲು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಮುಖ್ಯಮಂತ್ರಿಯವರ ಗಮನಕ್ಕೆ ತರಬೇಕು ಎಂದು ನಿರ್ದೇಶಕ ಕಿಶೋರ್ ಡಿ ಶೆಟ್ಟಿ ತಿಳಿಸಿದರು.
ಥಿಯೇಟರ್ ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಿನಿಮಾಗಳನ್ನು ಬಿಡುಗಡೆಗೊಳಿಸಲು ಅವಕಾಶ ನೀಡಬೇಕು. ಈಗಾಗಲೇ ಕೆಲವು ಸಿನಿಮಾ ಮಂದಿರಗಳು ಮುಚ್ಚಿವೆ. ಇನ್ನು ಕೆಲವು ಹಾಗೆಯೇ ಇದೆ. ಅವುಗಳನ್ನು ಉಳಿಸುವ ಪ್ರಯತ್ನ ಮಾಡಬೇಕು. ಇದೇ ರೀತಿ ಮುಂದುವರೆದರೆ ತುಳು ಸಿನಿಮಾರಂಗಕ್ಕೆ 1971 ರ ಸ್ಥಿತಿ ಬರಬಹುದು.ಅದಕ್ಕೆ ಅವಕಾಶ ನೀಡಬಾರದು. ಹೀಗಾಗಿ ಚಿತ್ರಮಂದಿರ ಗಳಿಗೆ ವಿಧಿಸಿರುವ ನಿರ್ಬಂಧಗಳನ್ನು ತೆರವುಗೊಳಿಸಿ ಶೇ. 100ರ ಸಾಮರ್ಥ್ಯದಲ್ಲಿ ಅವಕಾಶ ನೀಡಬೇಕು. ಅದೇ ರೀತಿ ಸರಕಾರ ಸಮಾರಂಭಗಳಿಗೆ, ಸಮಾವೇಶಗಳಿಗೆ ಅವಕಾಶ ನೀಡಿದಂತೆ ನಾಟಕ ಪ್ರದರ್ಶನಗಳಿಗೂ ಅನುಮತಿ ನೀಡಬೇಕು. ಕಲಾವಿದರು ಅತಂತ್ರ ಸ್ಥಿತಿಯಲ್ಲಿದ್ದಾರೆ, ಬೇರೆ ಬೇರೆ ದಿಕ್ಕಿನತ್ತ ಸಾಗುತ್ತಿದ್ದಾರೆ. ನಾಟಕ ಪ್ರದರ್ಶನಗಳಿಗೆ ಅವಕಾಶ ನೀಡುವ ಮೂಲಕ ಜಿಲ್ಲಾಡಳಿತ ಕಲಾವಿದರಿಗೆ ನೆರವಾಗಲಿ ಎಂದು ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ತಿಳಿಸಿದರು.
ಸುಮಾರು 10 ರಿಂದ 15 ಸಿನಿಮಾಗಳು ತೆರೆಗೆ ಬರಲು ರೆಡಿಯಾಗಿದೆ. ಶೇಕಡಾ 50 ರಷ್ಟು ಅವಕಾಶ ನೀಡಿದರೆ ಟಾಕೀಸ್‌ಗೆ ಯಾರೂ ಬರುತ್ತಿಲ್ಲ. ಸರಕಾರ ಈ ಬಗ್ಗೆ ಗಮನಹರಿಸಬೇಕು. ಮಾರುಕಟ್ಟೆ ವ್ಯಾಪಾರಕ್ಕೆ ಶೇ. 100ರ ಸಾಮರ್ಥ್ಯದಲ್ಲಿ ಸಾರ್ವಜನಿಕ ಸಂಚಾರಕ್ಕೆ ಅವಕಾಶ ನೀಡಿದೆ. ನಾಟಕ-ಸಿನಿಮಾ ವಿಚಾರದಲ್ಲಿ ತಾರತಮ್ಯ ಸಲ್ಲದು. ಕಲಾವಿದರಿಗೆ ಅನ್ಯಾಯ ಆಗಿದೆ. ಸಿನಿಮಾ ನಿರ್ಮಾಪಕರು ಎಲ್ಲಿಂದಲೋ ಸಾಲ ತಂದು ಸಿನಿಮಾಕ್ಕೆ ಬಂಡವಾಳ ಮಾಡಿ ಈಗ ಬಡ್ಡಿ ಕಟ್ಟಲಾಗದ ಸ್ಥಿತಿಗೆ ತಲುಪಿದ್ದಾರೆ. ಕಲಾವಿದರು ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ. ಹೀಗಾಗಿ ರಾಜ್ಯ ಸರಕಾರ ಇದಕ್ಕೆ ಸೂಕ್ತ ಪರಿಹಾರ ಬದಲಾಗಿಸಬೇಕೆಂದು ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ತಿಳಿಸಿದರು. ಕ್ಯಾಟ್ಕ ಸಂಸ್ಥೆಯ ಅಧ್ಯಕ್ಷ ಮೋಹನ್ ಕೊಪ್ಪಲ ಉಪಸ್ಥಿತರಿದ್ದರು.