ಬೈರಂಪಳ್ಳಿ: ಕಳಪೆ ಕಾಮಗಾರಿಯ ರಸ್ತೆ-ಸ್ಥಳೀಯರ ಆಕ್ರೋಶ- ಅಧಿಕಾರಿಗಳಿಂದ ಪರಿಶೀಲನೆ
ಉಡುಪಿ ಸೆ.15(ಉಡುಪಿ ಟೈಮ್ಸ್ ವರದಿ): ಬೈರಂಪಳ್ಳಿ ಗ್ರಾಮ ಪಂಚಾಯತ್‍ನ 41ನೇ ಶೀರೂರು ಗ್ರಾಮದ ಶೀರೂರು ಕಲ್ಲಾಳ ಬ್ರಹ್ಮಸ್ಥಾನಕ್ಕೆ ಹೋಗುವ ರಸ್ತೆಯ ಕಳಪೆ ಕಾಮಗಾರಿಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಭಾಗದ ಕಳಪೆ ಕಾಮಗಾರಿ ಬಗ್ಗೆ ಸ್ಥಳೀಯ ಸಾಮಾಜಿಕ ಹೋರಾಟಗಾರರು, ಪಂಚಾಯತ್ ಚುನಾಯಿತ ಸದಸ್ಯರುಗಳಿಗೆ ಸಾರ್ವಜನಿಕರಿಂದ ಬಂದಂತಹ ದೂರಿನ ಆಧಾರದ ಮೇಲೆ, ಬೈರಂಪಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ಬೈರಂಪಳ್ಳಿ ಅವರು ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರಿಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿ ದೂರು ನೀಡಿದ್ದರು.
ಅದರಂತೆ ಜಿಲ್ಲಾ ಪಂಚಾಯತ್ ಸಿಇಒ ಅವರ ಮಾರ್ಗದರ್ಶನದಂತೆ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಶ್ರೀಕಾಂತ ನಾಯ್ಕ ಮತ್ತು ಇಂಜಿನಿಯರ್ ಸುಭಾಸ್ ರೆಡ್ಡಿರವರ ತಂಡವು ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದಾಗ ಕಳಪೆ ಕಾಮಗಾರಿ ನಡೆಸಿರುವುದು ದೃಢ ಪಟ್ಟಿರುತ್ತದೆ. ಈ ವೇಳೆ ಕಾಮಗಾರಿಯ ಅಂದಾಜು ಪಟ್ಟಿಯಲ್ಲಿ ನೀಡಿರುವಂತಹ ಪ್ಲಾನ್ ಪ್ರಕಾರ ರಸ್ತೆಯ ಕಾಮಗಾರಿಯನ್ನು ನಿರ್ವಹಿಸದೆ ಕೇವಲ ಹಳೆಯ ಡಾಮರೀಕರಣವನ್ನು ಮೇಲಿಂದಲೇ ಅಗೆದು ಕೇವಲ ಅಲ್ಲಲ್ಲಿ ಜಲ್ಲಿಯನ್ನು ಹಾಕಿ ಭೂಮಿಯ ತಳಮಟ್ಟವನ್ನು ಭದ್ರತೆಗೊಳಿಸದೆ, ಜಲ್ಲಿ, ರೋಲರ್ ಹಾಕದೆ ಮಧ್ಯ ಭಾಗದಲ್ಲಿ 6 ಇಂಚು ಕಾಂಗ್ರೆಟ್ ಮಾಡುವ ಬದಲು ಕೇವಲ 3 ಇಂಚಿನಷ್ಟು ಕಾಮಗಾರಿ ಮಾಡುತ್ತಿರುವುದು ಕಂಡು ಬಂದಿದೆ. ಮತ್ತು ಎರಡು ಬದಿಗಳಲ್ಲಿ ಕೇವಲ ಲೆಕ್ಕಬರಿಸಲು ಚನೇಲ್‍ಗಳನ್ನು ಮಣ್ಣಿನ ಅಡಿಗೆ ಹಾಕಿ 6 ಇಂಚು ದಪ್ಪದ ಕಾಂಕ್ರಿಟ್ ಕಾಮಗಾರಿಯನ್ನು ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿರುತ್ತದೆ.
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ವೇಳೆ, ಸಾರ್ವಜನಿಕರು ಸರಕಾರದ ಹಣದ ಮತ್ತು ಸಾರ್ವಜನಿಕರ ತೆರಿಗೆಯ ಹಣ ದುರುಪಯೋಗ ಪಡಿಸಿಕೊಂಡು ಕಳಪೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಸತೀಶ್ ಶೆಟ್ಟಿ ಬೈರಂಪಳ್ಳಿ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡು ಅಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಈ ಕಾಮಗಾರಿಯ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಾಮಗಾರಿಯನ್ನು ನಿಲ್ಲಿಸಿ, ವ್ಯವಸ್ಥಿತವಾಗಿ ಅಂದಾಜು ಪಟ್ಟಿಯ ಪ್ರಕಾರ ನಿರ್ವಹಿಸಲು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಹಾಗೂ ಈ ಗುತ್ತಿಗೆದಾರನ ಪರವಾನಿಗೆಯನ್ನು ರದ್ದು ಮಾಡಿ ಭವಿಷ್ಯದಲ್ಲಿ ಇಂತಹ ಕೃತ್ಯಗಳು ಆಗದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡರು. ಮತ್ತು ಈ ಕಾಮಗಾರಿಯ ಕರಾರನ್ನು ಮಾಡಿರುವ ಪ್ರಶಾಂತ್ ಬೈರಂಪಳ್ಳಿ ಮತ್ತು ಶ್ರೀಜಿತ್ ನಾಯ್ಕ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ವಿನಂತಿಸಿದರು.