ಮಂಗಳೂರು: ಶಂಕಿತ ನಿಫಾ ಸೋಂಕಿತನ ವರದಿ ‘ನೆಗೆಟಿವ್’
ಮಂಗಳೂರು: ನಿಫಾ ಸೋಂಕು ತಗುಲಿರುವ ಶಂಕೆ ಮೇರೆಗೆ ಸ್ವ ಇಚ್ಛೆಯಿಂದ ನಿಫಾ ಪರೀಕ್ಷೆಗೊಳಗಾಗಿದ್ದ ಯುವಕನ ವರದಿಯು ಆರೋಗ್ಯ ಇಲಾಖೆಯ ಕೈ ಸೇರಿದ್ದು, ವರದಿಯು ‘ನೆಗೆಟಿವ್’ ಅನ್ನೋದಾಗಿ ದಕ್ಷಿಣ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಈ ಮೂಲಕ ಕೇರಳದಿಂದ ಕರ್ನಾಟಕಕ್ಕೂ ನಿಫಾ ವೈರಸ್ ಕಾಲಿಟ್ಟಿದೆಯೇ ಅನ್ನೋ ಆತಂಕ ಕೊಂಚ ದೂರವಾದಂತಾಗಿದೆ. ಕಾರವಾರದ ಯುವಕನೋರ್ವ ಗೋವಾದಲ್ಲಿ ಮೈಕ್ರೋಬಯೋಲಾಜಿಸ್ಟ್ ಆಗಿದ್ದು, ಎರಡು ದಿನಗಳ ಹಿಂದಷ್ಟೇ ಮಂಗಳೂರಿಗೆ ಆಗಮಿಸಿ ನಿಫಾ ವೈರಸ್ ಸೋಂಕಿನ ಪತ್ತೆಗಾಗಿ ನಡೆಸುವ ಪರೀಕ್ಷೆಗೆ ಒಳಪಟ್ಟಿದ್ದರು. ಯುವಕನಲ್ಲಿ ನಿಫಾ ವೈರಸ್ ಸೋಂಕಿನ ಲಕ್ಷಣಗಳಿದ್ದು, ಕೂಡಲೇ ತಪಾಸಣೆ ಬಳಿಕ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ನಿಗಾದಲ್ಲಿರಿಸ ಲಾಗಿತ್ತು. ಪರೀಕ್ಷಾ ಮಾದರಿಯನ್ನು ಪುಣೆಯ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದ್ದು, ಇದೀಗ ವರದಿಯು ಆರೋಗ್ಯ ಇಲಾಖೆಯ ಕೈ ಸೇರಿದ್ದು ನಿಫಾ ಸೋಂಕಿನ ಭೀತಿ ಇಲ್ಲ ಅನ್ನೋದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.