ಕಾಂಗ್ರೆಸ್ ಮಾಡಿದ ಸಾಲದಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ- ಸಿ.ಟಿ. ರವಿ
ಬೆಂಗಳೂರು, ಸೆ.14: ಕಾಂಗ್ರೆಸ್ ಮಾಡಿದ ಪಾಪದ ಸಾಲ ತೀರಿಸಬೇಕಾಗಿರುವುದರಿಂದ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ವಿಧಾನಮಂಡಲದ 2ನೇ ದಿನದ ಕಲಾಪದ ದಿನ ಮಾತನಾಡಿದ ಅವರು, ಬೆಲೆ ಏರಿಕೆ ನಮ್ಮ ದೇಶದಲ್ಲಿ ಮಾತ್ರ ಆಗುತ್ತಿಲ್ಲ. ಜಾಗತಿಕ ಮಟ್ಟದಲೂ ಬೆಲೆ ಏರಿಕೆಯಾಗುತ್ತಿದೆ. ಬೆಲೆ ಏರಿಕೆ ತಾತ್ಕಾಲಿಕವಾಗಿದೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು. ಹಾಗೂ ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ವಿದೇಶಿ ವಿನಿಮಯ ಇದೆ. ಹೀಗಾಗಿ ದೇಶದ ಭವಿಷ್ಯದ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ ಎಂದ ಅವರು, ಕಾಂಗ್ರೆಸ್‌ನವರಿಗೆ ಮಾತ್ರ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಆತಂಕವಿದೆ ಎಂದು ವ್ಯಂಗ್ಯವಾಡಿದರು. ಇದೇ ವೇಳೆ ಈಗ ಹೋರಾಟ ಮಾಡುತ್ತಿದ್ದವರು ಅಂದು ಸಾಲ ಪಡೆಯುವುದಕ್ಕೆ ವಿದೇಶಗಳಿಗೆ ಹೋಗುತ್ತಿದ್ದರು ಹೀಗಾಗಿ ಚಿನ್ನವನ್ನು ಒತ್ತೆಯಾಗಿ ಇಟ್ಟವರು ಯಾರು ಎಂದು ಪ್ರಶ್ನಿಸಿದರು.