ಮುಸ್ಲಿಂ ಸಮುದಾಯದ ಪ್ರಜ್ಞಾವಂತ ನಾಯಕರು ಉಗ್ರವಾದವನ್ನು ವಿರೋಧಿಸಬೇಕು- ಮೋಹನ್ ಭಾಗವತ್
ಪುಣೆ, ಸೆ. 07: ಭಾರತದಲ್ಲಿ ವಾಸಿಸುವ ಹಿಂದೂಗಳು ಹಾಗೂ ಮುಸ್ಲಿಂಮರು ಒಂದೇ ಆಗಿದ್ದಾರೆ. ಪ್ರತಿಯೋರ್ವ ಭಾರತೀಯನು ಹಿಂದೂ ಹಾಗಾಗಿ ದೇಶದ ಸಂವೇದನಾಶೀಲ ಮುಸ್ಲಿಂ ನಾಯಕರು ಮೂಲಭೂತವಾದಿಗಳ ವಿರುದ್ದ ದೃಢವಾಗಿ ಎದ್ದುನಿಲ್ಲಬೇಕು ಎಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮುಸ್ಲಿಂ ನಾಯಕರಿಗೆ ಕರೆ ನೀಡಿದ್ದಾರೆ.
ಪುಣೆಯಲ್ಲಿ ಗ್ಲೋಬಲ್ ಸ್ಟ್ರಾಟೆಜಿಕ್ ಪಾಲಿಸಿ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇಸ್ಲಾಂ ಎನ್ನುವುದು ಭಾರತಕ್ಕೆ ಆಕ್ರಮಣಕಾರರೊಂದಿಗೆ ಬಂದಿದ್ದು, ಬುದ್ದಿವಂತ ಮುಸ್ಲಿಂ ನಾಯಕರು ಅನಗತ್ಯವಾದ ಸಮಸ್ಯೆಗಳನ್ನು ವಿರೋಧಿಸಬೇಕು. ಮುಸ್ಲಿಂ ಸಮುದಾಯದ ಪ್ರಜ್ಞಾವಂತ ನಾಯಕರು ಉಗ್ರವಾದವನ್ನು ವಿರೋಧಿಸಬೇಕು. ಮತಾಂಧರ ವಿರುದ್ದ ಅವರು ದೃಢವಾಗಿ ಮಾತನಾಡಬೇಕು. ಈ ಕಾರ್ಯಕ್ಕೆ ದೀರ್ಘ ಪ್ರಯತ್ನ ಹಾಗೂ ತಾಳ್ಮೆಯ ಅಗತ್ಯ ಇದೆ. ನಮಗೆಲ್ಲರಿಗೂ ಇದು ದೀರ್ಘ ಹಾಗೂ ಕಠಿಣವಾದ ಪರೀಕ್ಷೆಯಾಗಿದೆ. ಈ ಪ್ರಯತ್ನವನ್ನು ನಾವು ಎಷ್ಟು ಬೇಗ ಆರಂಭಿಸುತ್ತೇವೆಯೋ ಅದು ನಮ್ಮ ಸಮಾಜಕ್ಕೆ ಕಡಿಮೆ ಹಾನಿ ಮಾಡುತ್ತದೆ” ಎಂದಿದ್ದಾರೆ.
ಭಾರತದಲ್ಲಿ ಅಲ್ಪಸಂಖ್ಯಾತರು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ ಎಂದ ಅವರು, ಹಿಂದೂಗಳು ಯಾರೊಂದಿ ಗೂ ಕೂಡಾ ದ್ವೇಷ ಕಟ್ಟಿಕೊಳ್ಳುವುದಿಲ್ಲ. ಮುಸ್ಲಿಂ ಪ್ರಾಬಲ್ಯದ ಬಗ್ಗೆ ಯೋಚಿಸಬೇಕಿಲ್ಲ. ಆದರೆ, ಭಾರತದ ಪ್ರಾಬಲ್ಯದ ಕುರಿತು ಖಂಡಿತವಾಗಿ ನಾವು ಯೋಚಿಸಬೇಕಿದೆ. ಭಾರತದ ಸರ್ವತೋಮುಖ ಬೆಳವಣಿಗೆಗಾಗಿ ಎಲ್ಲರೂ ಜೊತೆಯಾಗಿ ಶ್ರಮಿಸಬೇಕಿದೆ” ಎಂದು ಸಲಹೆ ನೀಡಿದ್ದಾರೆ.