ಮಂಗಳೂರು:ಪತ್ನಿಗೆ ಉಗ್ರ ಸಂಘಟನೆಯೊಂದಿಗೆ ನಂಟು- ಪತಿಯಿಂದ ದೂರು

ಮಂಗಳೂರು: ತನ್ನ ಪತ್ನಿಗೆ ಉಗ್ರ ಸಂಘಟನೆಯೊಂದಿಗೆ ನಂಟಿದ್ದು, ಈಗ ನಾಪತ್ತೆ ಆಗಿರುವುದಾಗಿ ವ್ಯಕ್ತಿಯೊಬ್ಬರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಬೆಳ್ತಂಗಡಿ ತಾಲ್ಲೂಕಿನ ನೆರಿಯ ಗ್ರಾಮದ ಚಿದಾನಂದ ಕೆ.ಆರ್., ಪತ್ನಿ ವಿರುದ್ಧ ದೂರು ನೀಡಿದ್ದಾರೆ. ಇವರ ಪತ್ನಿ ರಾಜಿ ರಾಘವನ್ 11 ವರ್ಷಗಳಿಂದ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ‘ಪತ್ನಿ ಜುಲೈ 11ಕ್ಕೆ ಮತ್ತೆ ಊರಿಗೆ ಬಂದಿದ್ದು, ಮಗಳನ್ನು ತನ್ನೊಂದಿಗೆ ಕಳುಹಿಸಿಕೊಡಬೇಕು ಎಂದು ಒತ್ತಾಯಿಸುತ್ತಿದ್ದಾಳೆ. ಇದಕ್ಕೆ ಆಕೆಯ ಅಕ್ಕನ ಕುಮ್ಮಕ್ಕಿದೆ’ ಎಂದು ಪತಿ ಆರೋಪಿಸಿದ್ದಾರೆ.

‘ಲಕ್ಷದ್ವೀಪದಿಂದ ಒಬ್ಬ ತನಗೆ ಕರೆ ಮಾಡಿ, ನೀನು ನಿನ್ನ ಮಗಳು ಹಾಗೂ ಹೆಂಡತಿಯನ್ನು ನಮ್ಮೊಂದಿಗೆ ಕಳುಹಿಸಿಕೊಡಬೇಕು. ಇಲ್ಲದಿದ್ದಲ್ಲಿ ಹೇಗೆ ಕರೆದುಕೊಂಡು ಹೋಗಬೇಕು ಎನ್ನುವುದು ನನಗೆ ಗೊತ್ತು ಎಂದು ಬೆದರಿಕೆ ಹಾಕಿದ್ದಾನೆ’ ಎಂದು ದೂರಿದ್ದಾರೆ.

ಆ.26ರಂದು ರಾಜಿ ರಾಘವನ್ ನಾಪತ್ತೆ

ಆ.26ರಂದು ಮಗಳ ಜೊತೆ ರಾತ್ರಿ ಮಲಗಿದ್ದ ರಾಜಿ ರಾಘವನ್, ನಸುಕಿನ ವೇಳೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ನಾವು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದೆವು. ಮೊನ್ನೆ ಪೊಲೀಸರು ಕರೆ ಮಾಡಿ ‘ರಾಜಿ ಅವರು ಮಂಗಳೂರಿನ ವೇದಂ ಆಸ್ಪತ್ರೆಯಲ್ಲಿ ದಾಖಲಾಗಿದ್ದು, 10 ದಿನಗಳ ಚಿಕಿತ್ಸೆ ನಡೆಯುತ್ತಿದೆ. ಅಷ್ಟರವರೆಗೆ ಕಾಯಿರಿ’ ಎಂದು ಹೇಳಿದ್ದಾರೆ. ಆ ಬಳಿಕ ನಮ್ಮೊಂದಿಗೆ ಸಂಪರ್ಕದಲ್ಲಿಲ್ಲ. ಆದರೆ ನನಗೆ ಕೇರಳದಿಂದ ಪತ್ನಿ, ಮಗಳಿಬ್ಬರನ್ನು ಕಳುಹಿಸಿ ಕೊಡಬೇಕು ಎಂದು ಕರೆಯ ಮೇಲೆ ಕರೆ ಬರುತ್ತಿವೆ’ ಎಂದು ದೂರು ನೀಡಿದ್ದಾರೆ.

ಕೃಷಿ ಮಾಡಿ ಬದುಕುತ್ತಿರುವ ನನಗೆ ಬದುಕಿಗೆ ಯಾವುದೇ ತೊಂದರೆಯಿಲ್ಲ. ಇದೀಗ ಪತ್ನಿಯಿಂದ ತೊಂದರೆಯಾಗಿದ್ದು, ನನಗೂ ನನ್ನ ಮಕ್ಕಳಿಗೂ ಬದುಕಲು ತೊಂದರೆ ಆಗಬಾರದು. ಅವಳು ದುಬೈಯಲ್ಲಿ ಯಾವ ಸಂಘಟನೆಯೊಂದಿಗೆ ಇದ್ದಾಳೆ, ಲಕ್ಷದ್ವೀಪ ದಿಂದ ಕರೆ ಮಾಡುವವರು ಯಾರು ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಪತಿ ಚಿದಾನಂದ ಕೆ.ಆರ್. ಆಗ್ರಹಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!