ಎಸ್‌ಸಿ, ಎಸ್‌ಟಿ ಜಾತಿ ಪ್ರಮಾಣ ಪತ್ರಗಳ ಪದೇ ಪದೇ ಪರಿಶೀಲನೆ ಸಲ್ಲದು: ಸುಪ್ರೀಂ
ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ನೀಡಲಾಗುವ ಜಾತಿ ಪ್ರಮಾಣಪತ್ರಗಳನ್ನು ಪದೇ ಪದೇ ಪರಿಶೀಲನೆ ಗೊಳಪಡಿಸುವುದು ಅವರಿಗೆ ಹಾನಿಕಾರಕರ. ವಿತರಿಸುವ ಪ್ರಮಾಣಪತ್ರಗಳು ಮೊದಲೇ ಪರಿಶೀಲನಾ ಸಮಿತಿಯ ಪರಿಶೀಲನೆಗೆ ಒಳಪಟ್ಟಿರಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿತು.
ನಕಲಿ ಪ್ರಮಾಣಪತ್ರವನ್ನು ಪತ್ತೆ ಹಚ್ಚುವುದು ಪರಿಶೀಲನಾ ಸಮಿತಿಯ ಉದ್ದೇಶ. ಆದರೆ, ಮತ್ತೆ ಮತ್ತೆ ಪರಿಶೀಲನೆ ನಡೆಸುವುದು ಆ ಸಮುದಾಯದ ಜನರಿಗೆ ಹಾನಿಕಾರಕವಾಗಲಿದೆ. ಸಮರ್ಪಕ ಪರಿಶೀಲನೆಯಿಲ್ಲದೇ ವಿತರಿಸಲಾದ ಪ್ರಕರಣಗಳಲ್ಲಿ ಮಾತ್ರವೇ ಮರುಪರಿಶೀಲನೆ ನಡೆಸಬೆಕು ಎಂದು ನ್ಯಾಯಮೂರ್ತಿ ಎಲ್.ನಾಗೇಶ್ವರರಾವ್ ನೇತೃತ್ವದ ಪೀಠ ಹೇಳಿತು.
ತಾವು ಪರಿಶಿಷ್ಟ ಜಾತಿಗೆ ಸೇರುವ ವಲ್ಲುವನ್ ಸಮುದಾಯಕ್ಕೆ ಸೇರಿದವರು ಎಂದು 1982ರಲ್ಲಿ ನೀಡಲಾಗಿದ್ದ ಪ್ರಮಾಣಪತ್ರವನ್ನು ರದ್ದುಗೊಳಿಸಿದ್ದ ಚೆನ್ನೈನ ಜಿಲ್ಲಾ ಕಣ್ಗಾವಲು ಸಮಿತಿಯ ಆದೇಶವನ್ನು ಪ್ರಶ್ನಿಸಿ ಜೆ.ಚಿತ್ರಾ ಎಂಬುವರು ಸಲ್ಲಿಸಿದ್ದ ಮನವಿಯನ್ನು ಪೀಠವು ವಿಚಾರಣೆಗೆ ಪರಿಗಣಿಸಿತು.
ಅರ್ಜಿದಾರರು ಅಕೌಂಟೆಂಟ್ ಜನರಲ್ ಕಚೇರಿಗೆ ಸೇರ್ಪಡೆಯಾದ ಬಳಿಕ ಡಾ.ಅಂಬೇಡ್ಕರ್ ಸೇವಾ ಸಂಸ್ಥೆಯು ಅವರ ಪ್ರಮಾಣ ಪತ್ರದ ಅಸಲಿತನ ಕುರಿತು ಶಂಕೆ ವ್ಯಕ್ತಪಡಿಸಿ ದೂರು ಸಲ್ಲಿಸಿತ್ತು. ದೂರು ಪರಿಶೀಲಿಸಿದ ಜಿಲ್ಲಾ ಕಣ್ಗಾವಲು ಸಮಿತಿಯು ಅರ್ಜಿದಾರರು ವಲ್ಲುವನ್ ಸಮುದಾಯಕ್ಕೆ ಸೇರಿದವರು ಎಂದು ಅಭಿಪ್ರಾಯಪಟ್ಟಿತ್ತು. ನಕಲಿ ಪ್ರಮಾಣಪತ್ರ ನೀಡಿಯೇ ಹುದ್ದೆಗೆ ನೇಮಕವಾಗಿದ್ದಾರೆ ಎಂದು ಸಂಸ್ಥೆಯು ಮತ್ತೆ ರಾಜ್ಯ ಸಮಿತಿಗೆ ದೂರು ನೀಡಿದ್ದು, ಇದನ್ನು ಆಧರಿಸಿ ರಾಜ್ಯ ಕಣ್ಗಾವಲು ಸಮಿತಿಯು ಮತ್ತೆ ಜಿಲ್ಲಾ ಸಮಿತಿಗೆ ಪ್ರಕರಣವನ್ನು ಮರುಪರಿಶೀಲಿಸಲು ಒಪ್ಪಿಸಿತ್ತು. ಮತ್ತೊಮ್ಮೆ ವಿಚಾರಣೆ ನಡೆಸಿದ ಜಿಲ್ಲಾ ಸಮಿತಿ ಅಂತಿಮವಾಗಿ ಪ್ರಮಾಣಪತ್ರವನ್ನು ರದ್ದುಪಡಿಸಿತ್ತು.
ಅದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠವು, ಒಮ್ಮೆ ಅರ್ಜಿದಾರರಿಗೆ ನೀಡಲಾದ ಪ್ರಮಾಣಪತ್ರವು ಅಂತಿಮವಾದುದು. ಈ ಪ್ರಕರಣದಲ್ಲಿ ವಿಚಾರಣೆ ನಡೆಸುವ ಯಾವುದೇ ಅಧಿಕಾರದ ವ್ಯಾಪ್ತಿಯನ್ನು ರಾಜ್ಯ ಕಣ್ಗಾವಲು ಸಮಿತಿಯು ಹೊಂದಿಲ್ಲ ಎಂದೂ ಕೋರ್ಟ್ ತಿಳಿಸಿತು.