ನಟಿಯರಿಬ್ಬರ ಡ್ರಗ್ಸ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಎಫ್ ಎಸ್ ಎಲ್ ವರದಿಯಲ್ಲಿ ‘ಪಾಸಿಟಿವ್’ದೃಢ!

ಬೆಂಗಳೂರು: ಸ್ಯಾಂಡಲ್ ವುಡ್ ನಟಿಮಣಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಅವರ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿ ಸಿದಂತೆ ಇಂದು ಹೊಸ ತಿರುವು ಪಡೆದಿದ್ದು, ನಟಿಯರಿಬ್ಬರು ಮಾದಕ ವಸ್ತು ತೆಗೆದುಕೊಂಡಿರುವುದು ಸಾಬೀತಾಗಿದೆ ಎಂಬ ಅಂಶ ಎಫ್ ಎಸ್ ಎಲ್ ವರದಿಯಿಂದ ತಿಳಿದುಬಂದಿದೆ.

ನಟಿಯರಾದ ಸಂಜನಾ, ರಾಗಿಣಿ ಡ್ರಗ್ಸ್​ ಸೇವಿಸಿರುವುದು ಎಫ್​ಎಸ್​ಎಲ್ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಬರೊಬ್ಬರಿ 10 ತಿಂಗಳ ಬಳಿಕ ಈ ವರದಿ ಸಿಸಿಬಿ ಪೊಲೀಸ್ ಕೈ ಸೇರಿದೆ. ಹೈದರಾಬಾದ್ ಎಫ್ ಎಫ್ ಎಲ್ ಲ್ಯಾಬ್ ನಿಂದ ಬಂದ ವರದಿಯಲ್ಲಿ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ಅವರ ಸಹಚರರಾದ ವಿರೇನ್ ಖನ್ನಾ, ರವಿಶಂಕರ್, ಲೂಮ್ ಪೆಪ್ಪರ್, ರಾಹುಲ್ ತೋನ್ಸೆ ಡ್ರಗ್ಸ್ ಸೇವಿಸಿರುವುದು ವರದಿಯಲ್ಲಿ ದೃಡಪಟ್ಟಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ತಲೆ ಕೂದಲನ್ನು 2020ರ ಅಕ್ಟೋಬರ್​​ನಲ್ಲಿ ಹೈದರಾಬಾದ್​ ಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿ ಈಗ ಸಿಸಿಬಿ ಪೊಲೀಸರ ಕೈ ಸೇರಿದೆ. ಸದರಿ ವರದಿಯಲ್ಲಿ ಇಬ್ಬರೂ ನಟಿಯರು ಡ್ರಗ್ಸ್ ಸೇವಿಸಿದ್ದರು ಎನ್ನುವುದು ದೃಢಪಟ್ಟಿದ್ದು, ಜತೆಗೆ ವಿರೇನ್​ ಖನ್ನಾ ಕೂಡ ಡ್ರಗ್ಸ್​ ಸೇವಿಸಿರುವುದು ಖಚಿತವಾಗಿದೆ ಎನ್ನಲಾಗಿದೆ.

ಈ ಕುರಿತು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದು, ಸಾಮಾನ್ಯವಾಗಿ ಡ್ರಗ್ಸ್ ಪ್ರಕರಣದಲ್ಲಿ ರಕ್ತ ಮತ್ತು ಮೂತ್ರವನ್ನು ಮಾತ್ರ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆದರೆ ಅದರಲ್ಲಿ ಡ್ರಗ್ಸ್ ಸೇವಿಸಿ ಒಂದೆರಡು ದಿನದೊಳಗೆ ಪರೀಕ್ಷೆ ಮಾಡಿದರೆ ಮಾತ್ರ ಪಾಸಿಟಿವ್ ಬರುತ್ತದೆ. ಆದರೆ ಸಾಕಷ್ಟು ಪ್ರಕರಣಗಳಲ್ಲಿ ಆರೋಪಿಗಳ ತಡವಾಗಿ ಬಂಧನವಾಗುತ್ತದೆ. ಇಂತಹ ಪರಿಸ್ಥಿತಿಯತ್ತಿ ವರದಿ ನೆಗೆಟಿಲ್ ಬಂದು ಅವರು ತಪ್ಪಿಸಿಕೊಳ್ಳುತ್ತಾರೆ. ಆದ್ದರಿಂದ ಆರೋಪಿಗಳ ಕೂದಲನ್ನು ಕಳೆದ ವರ್ಷ ಹೈದರಾಬಾದ್ ಗೆ ಟೆಸ್ಟ್​ಗಾಗಿ ಕಳುಹಿಸಲಾಗಿತ್ತು. ಈಗ ಅದರಲ್ಲಿ ಪಾಸಿಟಿವ್ ಬಂದಿದೆ ಎಂದು ಹೇಳಿದ್ದಾರೆ.

ಕೋರ್ಟ್ ಗೆ ವರದಿ ಸಲ್ಲಿಕೆ
ಇನ್ನು ಸಿಸಿಬಿ ಅಧಿಕಾರಿಗಳು ಕಲೆಹಾಕಿರುವ ಎಫ್ಎಸ್ಎಲ್ ವರದಿಯನ್ನು ತನಿಖಾಧಿಕಾರಿ ಪುನೀತ್ ಅವರು, 33ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಸ್ತಾಂತರಿಸಲಿದೆ.

Leave a Reply

Your email address will not be published. Required fields are marked *

error: Content is protected !!